ಕೂಚ್ ಬೆಹಾರ್( ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ವೈಮನಸ್ಯ ತಾರಕಕ್ಕೆ ಏರಿದ್ದು, ಅಲ್ಲಲ್ಲಿ ಹಿಂಸಾಚಾರ ಸಾಮಾನ್ಯವಾಗಿದೆ.
ಕೂಚ್ ಬೆಹಾರ್ ಜಿಲ್ಲೆಯ ದಿನ್ಹಾಟಾ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ನ ಮಾಜಿ ಶಾಸಕ ಉದಯನ್ ಗುಹಾ ಅವರ ಮೇಲೆ ಗುರುವಾರ ಹಲ್ಲೆಯಾಗಿದ್ದು, ಸದ್ಯಕ್ಕೆ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್ ತಂದಿಟ್ಟ ಸಂಕಷ್ಟ: 23 ಕೋಟಿ ಭಾರತೀಯರನ್ನ ಬಡತನಕ್ಕೆ ತಳ್ಳಿದ ಕೊರೊನಾ!
ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಉದಯನ್ ಗುಹಾ ಆರೋಪಿಸಿದ್ದು, ಉದಯನ್ ಗುಹಾ ಅವರ ಕೆಲವು ಬೆಂಬಲಿಗರಿಗೂ ಕೂಡಾ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನ್ಹಾಟಾ ಪಟ್ಟಣದ ಪವರ್‌ಹೌಸ್ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ.
ಇದಕ್ಕೆ ಬಿಜೆಪಿ ನಾಯಕ ಅಜಯ್ ರೇ ಪ್ರತಿಕ್ರಿಯೆ ನೀಡಿದ್ದು, ಉದಯನ್ ಗುಹಾ ಅವರು ತಮ್ಮ ಬೆಂಬಲಿಗರಿಗೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಾರಿ ಉದಯನ್ ಗುಹಾ ಬಿಜೆಪಿಯ ನಿತೀಶ್ ಪ್ರಮಾಣಿಕ್ ಅವರಿಂದ ಸೋತಿದ್ದಾರೆ.