ಶ್ರೀನಗರ : ಡಿಸೆಂಬರ್‌ನಲ್ಲಿ ನಡೆದ ಲಾವೆಪೊರಾ ಎನ್‌ಕೌಂಟರ್‌ನಲ್ಲಿ ಬಲಿಯಾದ ಮೂವರು ಉಗ್ರರ ಬಗ್ಗೆ ಮುಂದಿನ 10 ದಿನಗಳಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
ನಾವು ಶೇ.60%ರಷ್ಟು ಸಾಕ್ಷ್ಯಗಳನ್ನು ಈಗಾಗಲೇ ಸಂಗ್ರಹಿಸಿದ್ದೇವೆ. ಉಳಿದ ಸಾಕ್ಷ್ಯಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳುತ್ತವೆ. ಈ ಸಾಕ್ಷ್ಯಗಳನ್ನು ಉಗ್ರರ ಕುಟುಂಬಗಳಿಗೆ ತೋರಿಸುತ್ತೇವೆ. ಇನ್ನು, ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆ ಮೂವರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುತ್ತಿಲ್ಲ ಎಂದು ಇದೇ ವೇಳೆ ಹೇಳಿದರು.
ಡಿಸೆಂಬರ್ 30ರಂದು ಶ್ರೀನಗರದ ಲಾವೆಪೊರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪುಲ್ವಾಮಾದ ಅಜಾಜ್ ಗಣೈ, ಶೋಪಿಯಾನ್‌ನ ಜುಬೈರ್ ಲೋನ್ ಮತ್ತು ಪುಲ್ವಾಮಾದ ಅಥರ್ ಮುಷ್ತಾಕ್ ಎಂಬ ಮೂವರು ಯುವಕರು ಸಾವಿಗೀಡಾಗಿದ್ದರು.
ಘಟನೆ ಸಂಬಂಧ ರೊಚ್ಚಿಗೆದ್ದಿದ್ದ ಈ ಯುವಕರ ಪೋಷಕರು ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆ ತಮ್ಮ ಮಕ್ಕಳು ನಿರಪರಾಧಿಗಳು, ಅವರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿದ್ದಾರೆ.