ರಾಂಪುರ (ಉತ್ತರ ಪ್ರದೇಶ): ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಸೋಮವಾರ ರಾಂಪುರ ನಗರದ ಜನನಿಬಿಡ ದೆಹಲಿ-ನೈನಿತಾಲ್ ರಾಷ್ಟ್ರೀಯ ಹೆದ್ದಾರಿ-87 ರಲ್ಲಿ ಈ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಗಳನ್ನು ಸೈಯದ್ ಜಯಾನ್, ಮೊಹಮ್ಮದ್ ಅಹದ್ ಮತ್ತು ಮೊಹಮ್ಮದ್ ಉಮೈರ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, 3 ವಿದ್ಯಾರ್ಥಿಗಳು 16 ರಿಂದ 17 ವರ್ಷದವರಾಗಿದ್ದು, ಅವರೆಲ್ಲರೂ ರಾಂಪುರದ ಗಂಜ್ ಪ್ರದೇಶದ ನಿವಾಸಿಗಳು. ಅವರು ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದು, ಸೋಮವಾರ, ಬೆಳಗ್ಗೆ 7.30 ರ ಸುಮಾರಿಗೆ, ಅಹದ್ ಮತ್ತು ಉಮೈರ್ ತಮ್ಮ ಸ್ಕೂಟಿಯಲ್ಲಿ ಜಯಾನ್‌ನನ್ನು ಶಾಲೆಗೆ ಬಿಡಲು ಹೋಗುತ್ತಿದ್ದರು.
ಈ ವೇಳೆ ರಸ್ತೆ ಮಧ್ಯೆ ಬೀದಿ ನಾಯಿ ಅಡ್ಡ ಬಂದಿದೆ. ಆ ನಾಯಿಯನ್ನು ಉಳಿಸಲು ಇವರು ಮುಂದಾದಾಗ ವಾಹನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಮೊದಲನೆಯದಾಗಿ ಇವರಲ್ಲಿ ಯಾರ ಬಳಿಯೂ ವಾಹನದ ಲೈಸನ್ಸ್ ಇಲ್ಲ, ಜೊತೆಗೆ ಹೆಲ್ಮೆಟ್ ಕೂಡ ಧರಿಸಿಲ್ಲ. ಇದರಿಂದ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಮೂವರು ತಲೆಗೆ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಕುರಿತು ರಾಂಪುರ್ ಎಎಸ್ಪಿ ಸಂಸಾರ್ ಸಿಂಗ್ ಪಾಲಕರು ತಮ್ಮ ಮಕ್ಕಳಿಗೆ ವಾಹನ ನೀಡುವಾಗ ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಈ ತರಹದ ಘಟನೆಗಳು ನಡೆಯುತ್ತಿರುತ್ತವೆ ಎಂದು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ತೆಲಂಗಾಣದ ಬಿಆರ್‌ಎಸ್ ಪಕ್ಷದ ಮುಖಂಡ, ಪುತ್ರ ಸಾವು
ಕಾಲುವೆಗೆ ಬಿದ್ದ ಕಾರು, 5 ಮಂದಿ ಸಾವು: ಸೋಮವಾರ ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಕಾರೊಂದು ಕಾಲುವೆಗೆ ಬಿದ್ದು ಒಂದೇ ಕುಟುಂಬದ 5 ಜನ ಸದಸ್ಯರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಕೊತ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ವೇವರ್ ಬ್ಯಾರೇಜ್‌ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟವರೆಲ್ಲ ಕಾಸ್‌ಗಂಜ್‌ನ ನಿವಾಸಿಗಳು.
ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಇಟಾಹ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಕರೆ ತರುವಾಗ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಈ ವೇಳೆ ಕಾರಿನೊಳಗೆ ಇದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಪುರುಷರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಒಂದು ಗಂಟೆಯ ಕಾರ್ಯಾಚರಣೆ ಬಳಿಕ ಕಾರಿನ ಸಮೇತ ಐವರ ಮೃತದೇಹಗಳನ್ನು ಹೊರತೆಗೆದಿದ್ದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಸಾವು.