ಬೆಲ್ಘಾರಿಯಾ (ಪಶ್ಚಿಮ ಬಂಗಾಳ): ಸಾಲದ ಸಮಸ್ಯೆಯಿಂದ ನೊಂದು ಮೂವರು ಒಡಹುಟ್ಟಿದವರು ಸಾವಿಗೆ ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸಜಲ್ ಚೌಧರಿ, ಬಿಮಲ್ ಚೌಧರಿ ಮತ್ತು ರಾಣು ಚೌಧರಿ ಎಂದು ಗುರುತಿಸಲಾಗಿದೆ. ಈ ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಲ್ಘಾರಿಯಾದ ಛಾಯಾ ನೀರ್ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ಸಹೋದರರ ಸಜಲ್ ಮತ್ತು ಬಿಮಲ್ ತಮ್ಮ ಸಹೋದರಿಯಾದ ರಾಣು ಚೌಧರಿ ಸಮೇತವಾಗಿ ವಾಸಿಸುತ್ತಿದ್ದರು. ಆದರೆ, ಮಂಗಳವಾರ ರಾತ್ರಿ ಮೂವರ ಶವಗಳು ಕೂಡ ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೂವರ ಒಡಹುಟ್ಟಿದವರ ಮೃತ ದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಸಹೋದರಿ: ಅನೇಕ ದಿನಗಳಿಂದ ಸಹೋದರಿ ರಾಣು ಚೌಧರಿ ಅನಾರೋಗ್ಯದಿಂದ ಹಾಸಿಗೆ ಹಿಡಿದ್ದಿದ್ದರು. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಆಕೆ ಚೇತರಿಸಿಕೊಳ್ಳಲಾಗದೇ ದೀರ್ಘಕಾಲದಿಂದಲೂ ಹಾಸಿಗೆಯಲ್ಲೇ ಇದ್ದರು. ಹೀಗಾಗಿಯೇ ಸಹೋದರ ಸಜಲ್ ತನ್ನ ತಂಗಿಯ ಚಿಕಿತ್ಸೆಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದರು. ಇದರಿಂದಲೇ ಸಜಲ್ ಸಾಲದ ಸುಳಿಯಲ್ಲಿ ಸಿಲುಕಿದ್ದ ಎಂಬುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಾವಿದನಾಗಿದ್ದ ಸಜಲ್ ಏಕೈಕ ಆಧಾರ ಸ್ತಂಭ: ಸಹೋದರಿ ರಾಣು ಚೌಧರಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಸಹೋದರ ಬಿಮಲ್ ಚೌಧರಿ ಕೆಲಸ ಸಿಗದೆ ನಿರುದ್ಯೋಗಿಯಾಗಿದ್ದರು. ಇವರಿಗೆ ಸಜಲ್ ಮಾತ್ರ ಏಕೈಕ ಆಧಾರ ಸ್ತಂಭವಾಗಿದ್ದರು. ತನ್ನ ಕುಟುಂಬದ ಜೀವನೋಪಾಯಕ್ಕಾಗಿ ಸಜಲ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಮೇಲಾಗಿ, ಚೇತರಿಸಿಕೊಳ್ಳುವ ಲಕ್ಷಣ ಕಾಣದ ತನ್ನ ಸಹೋದರಿ ರಾಣು ಚೌಧರಿಯ ಚಿಕಿತ್ಸೆಗಾಗಿ ಸಜಲ್ ಸಾಲ ಮಾಡಿಕೊಂಡು ಜರ್ಜರಿತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಮ್ಮ-ತಂಗಿಗೆ ವಿಷ ಕೊಟ್ಟು ನಂತರ ಸಜಲ್ ಆತ್ಮಹತ್ಯೆ?: ಸಾಲ ಮತ್ತು ಜೀವನ ನಡೆಸಲು ಹಣಕಾಸಿನ ತೊಂದರೆ ಒಂದಡೆಯಾದರೆ, ಸಜಲ್ ಗಳಿಕೆಯು ಅತ್ಯಲ್ಪವಾಗಿತ್ತು. ಹೀಗಾಗಿಯೇ ನೊಂದು ಮೂವರು ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ. ಇಲ್ಲವೇ, ಸಜಲ್ ಮೊದಲು ತನ್ನ ತಮ್ಮ ಮತ್ತು ತಂಗಿ ವಿಷ ಹಾಕಿ ಸಾಯಿಸಿ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಸಹ ವ್ಯಕ್ತವಾಗುತ್ತಿದೆ. ಯಾಕೆಂದರೆ, ರಾಣು ಮತ್ತು ಬಿಮಲ್ ಶವಗಳು ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದಿದ್ದವು. ಸಜಲ್ ಶವವು ಮನೆಯ ಸಮೀಪವಿರುವ ಕೊಳದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಸಿಲಿಂಡರ್ ಕೊಟ್ಟಿದ್ದ ಸಜಲ್: ಒಡಹುಟ್ಟಿದರ ಸಾವಿಗೆ ಬಗ್ಗೆ ನೆರೆಯವರಾದ ರಾಧಾ ಮಾಧವ್ ಸಹಾ ಮಾತನಾಡಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನನಗೆ ಸಜಲ್ ಕರೆ ಮಾಡಿ ತನ್ನ ಎಲ್‌ಪಿಜಿ ಸಿಲಿಂಡರ್ ಅನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. ಅದರ ನಂತರ ಮನೆಯಿಂದ ಹೊರಗೆ ಹೋಗಿದ್ದರು. ಇದಾದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಸಜಲ್ ಶವ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಅಲ್ಲಿಂದ ಮನೆಗೆ ಬಂದಾಗ ಇಲ್ಲಿ ಬಿಮಲ್ ಮತ್ತು ರಾಣು ಸಹ ಮೃತಪಟ್ಟಿರುವುದು ಬೆಳಕಿಗೆ ಬಂತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿವಾಹಿತೆಯನ್ನು ಕಿಡ್ನ್ಯಾಪ್ ಮಾಡಿ ರೇಪ್; ಚಂದ್ರಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ