ಫಜಿಲ್ಕಾ(ಪಂಜಾಬ್) : ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಮಗ ಸತ್ತನೆಂದು ನೊಂದ ಆತನ ತಾಯಿಯೂ ಮೃತಪಟ್ಟಿದ್ದಾಳೆ. ಇತ್ತ ತಂದೆ ಮತ್ತು ಅಜ್ಜಿ ಇಬ್ಬರೂ ಅಗಲಿದ್ದನ್ನು ಕಂಡು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್ನಲ್ಲಿ ನಡೆದಿದೆ. ಹೀಗೆ ಒಂದೇ ದಿನ ಮೂರು ಜೀವಗಳು ಬಲಿಯಾಗಿವೆ.
ಪಂಜಾಬ್ನ ಜಲಾಲಾಬಾದ್ ಜಿಲ್ಲೆಯ ತಾರೆವಾಲಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶದ ಘಟನೆ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದಿದೆ. ಈ ನೋವಿನ ಸಂಗತಿಯಿಂದ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.
ಮಾಹಿತಿಯ ಪ್ರಕಾರ, ತಾರೆವಾಲಾ ಗ್ರಾಮದ ನಿವಾಸಿ ಮಂಗತ್ ಸಿಂಗ್ ಅವರು ತಮ್ಮ ಮನೆಗೆ ಅಳವಡಿಸಲಾದ ಪಂಪ್‌ಸೆಟ್ ಅನ್ನು ಸ್ಟಾರ್ಟ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನು ಕಂಡ ತಾಯಿ ಹಾರೋ ಬಾಯಿ ಕೂಡ ತೀವ್ರ ಆಘಾತಕ್ಕೀಡಾಗಿ ಅವರೂ ಮೃತಪಟ್ಟಿದ್ದಾರೆ.
ತಂದೆ ಮತ್ತು ಅಜ್ಜಿಯ ಅಕಾಲಿಕ ಮರಣದ ಬಳಿಕ 17 ವರ್ಷದ ಬಾಲಕಿ ಲಖ್ವಿಂದರ್ ಝಲಾರ್ಗೆ ಆಕಾಶವೇ ಕವಿದಂತಾಗಿದೆ. ಇಬ್ಬರ ಅಂತ್ಯಕ್ರಿಯೆಯ ಬಳಿಕ ಒಂಟಿಯಾಗಿದ್ದ ಬಾಲಕಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಳು. ಇದಲ್ಲದೇ, ಕೆಲವೇ ತಿಂಗಳ ಹಿಂದೆ ಅವಳ ತಾಯಿಯೂ ಕೂಡ ಸಾವನ್ನಪ್ಪಿದ್ದಳು. ಇದೀಗ ತಂದೆ, ಅಜ್ಜಿಯ ಅಗಲಿಕೆ ಅವಳನ್ನು ಧೃತಿಗೆಡಿಸಿತ್ತು. ಏಕಾಂಗಿಯಾಗಿದ್ದ ಝರಾಲ್ ಮರುದಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಓದಿ: ಕೂಲ್ಡ್ರಿಂಕ್ಸ್ ಬಾಟಲಿ ಮುಚ್ಚಳ ಗಂಟಲಲ್ಲಿ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು