ಭುವನೇಶ್ವರ: ಪುಟ್ಟ ಹೆಣ್ಣು ಮಗು ತನ್ನ ಹೆತ್ತವರೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ಲಸ್ಮಿಸಾಗರದ ಚಿಂತಾಮಣಿಶ್ವರ ಪ್ರದೇಶದಲ್ಲಿ ನಡೆದಿದೆ. ಮೃತ ದಂಪತಿ ಮಹಾರಾಷ್ಟ್ರದ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತರನ್ನು ತುಷಾರ್ ರಾಜೇಂದ್ರ ಜಗತಾಬ್, ಪತ್ನಿ ನೀಲಾ ತುಷಾರ್ ಜಗತಾಬ್ ಮತ್ತು ಪುತ್ರಿ ಸಿಬಿನ್ಯಾ ಎಂದು ಗುರುತಿಸಲಾಗಿದೆ. ಹೆಣ್ಣು ಮಗುವನ್ನು ನೇಣು ಬಿಗಿದು ಕೊಂದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಸಾವಿನ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ. ಮಹಾರಾಷ್ಟ್ರದಲ್ಲಿ ನೆಲೆಸಿರುವ ತುಷಾರ್ ತಂದೆ ಇತ್ತೀಚೆಗೆ ಮೊದಲ ಹೆಂಡತಿಯ ಮರಣಾನಂತರ ಮತ್ತೊಂದು ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ತನ್ನ ಸಂಪೂರ್ಣ ಆಸ್ತಿಯನ್ನು ಎರಡನೇ ಹೆಂಡ್ತಿಯ ಹೆಸರಿಗೆ ವಿಲ್ ಮಾಡಿದ್ದಾರೆ. ಈ ವಿಷಯ ದಂಪತಿಗೆ ಗೊತ್ತಾಗಿದೆ. ಹೀಗಾಗಿ ತುಷಾರ್ ಮತ್ತು ನೀಲಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.