ನವದೆಹಲಿ: ದಕ್ಷಿಣ ದೆಹಲಿಯ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಯೋಗೇಶ್ (26), ನವೀನ್ ಲೋಹ್ಮದ್ (25) ಮತ್ತು ಬಲ್ಜೀತ್ (30) ಎಂದು ಗುರುತಿಸಲಾಗಿದೆ.
ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರಿನಲ್ಲಿ ಬಂದ ಮೂವರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸಹೋದರ ಕೂಗಾಟ ಕೇಳಿದ ಸಹೋದರಿ ಮನೆಯಿಂದ ಹೊರ ಬಂದು ತನ್ನ ಸಹೋದರನನ್ನು ಕಾಪಾಡಲು ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ಆಕೆಯ ಬಟ್ಟೆ ಹರಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಳಿಕ ಆಕೆಯನ್ನು ಮತ್ತು ಸಹೋದರನನ್ನು ಬಿಟ್ಟು ಪರಾರಿಯಾಗಿದ್ದಾರೆ.
ಇದಕ್ಕೂ ಮುನ್ನ ಇಟ್ಟಿಗೆ ಲಾರಿ ಚಾಲಕ ಮತ್ತು ಕೂಲಿ ಕಾರ್ಮಿಕರ ಮೇಲೆ ಇದೇ ಮೂವರು ಹಲ್ಲೆ ಮಾಡಿ ಆತನ ಬಳಿಯಿಂದ 30 ಸಾವಿರ ರೂಪಾಯಿ ಜೊತೆ ಕೆಲವೊಂದು ದಾಖಲೆಗಳನ್ನು ದೋಚಿಕೊಂಡು ಬಂದಿದ್ದರು. ಈ ಘಟನೆ ಕುರಿತು ಫತೇಪುರ್ ಬೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಂದ 5,200 ರೂ. ನಗದನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.