ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಹಾಕಲಾಗಿದೆ. ಸಿಎಂ ಹಾಗೂ ಭಾರತೀಯ ಕಿಸಾನ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಯುಪಿ ಸಿಎಂಗೆ ಬೆದರಿಕೆ ಕಳುಹಿಸಿದ ವ್ಯಕ್ತಿ ಲಕೋಟೆಯ ಮೇಲೆ ತನ್ನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸಹ ಬರೆದಿದ್ದಾರೆ.
ಇತ್ತೀಚೆಗಷ್ಟೇ ಲಖನೌ ಸೇರಿದಂತೆ ಹಲವು ಜಿಲ್ಲೆಗಳ ಧಾರ್ಮಿಕ ಸ್ಥಳಗಳನ್ನು ಸ್ಫೋಟಿಸುವ ಬೆದರಿಕೆ ಪತ್ರಗಳು ಬಾಂಬ್‌ಗಳೊಂದಿಗೆ ಬಂದಿದ್ದವು. ಸದ್ಯ ಬೆದರಿಕೆ ಪತ್ರ ಬಂದ ಹಿನ್ನೆಲೆ ಕಿಸಾನ್ ಮಂಚ್ ಅಧ್ಯಕ್ಷ ದೇವೇಂದ್ರ ತಿವಾರಿ ಆಲಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗೋಶಾಲೆ ಮತ್ತು ಗೋಸಂರಕ್ಷಣೆ ಹೆಸರಿನಲ್ಲಿ ನಮಗೆ ಸಾಕಷ್ಟು ತೊಂದರೆ ನೀಡಿದ್ದೀರಿ. ಇದೇ ನಿನಗೆ ದುರಾದೃಷ್ಟ ತಂದಿದೆ. ಇದರೊಂದಿಗೆ ಸುಧಾರಿಸಿಕೊಳ್ಳದಿದ್ದರೆ, ಯಾರೂ ಯಾರಿಗೂ ಮಾಡದಂತಹ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರದಲ್ಲಿ, ನನ್ನ ಹೆಸರು ಮೊಹಮ್ಮದ್ ಅಜ್ಮಲ್, ನೀವು ನನಗೆ ಹಾನಿ ಮಾಡಲು ಸಾಧ್ಯವಿಲ್ಲ. ನಿಮ್ಮ ಕೌಂಟ್‌ಡೌನ್ ಇಂದಿನಿಂದ ಪ್ರಾರಂಭವಾಗಿದೆ. ಮುಖ್ಯಮಂತ್ರಿಗೆ ಭದ್ರತೆ ಇದೆ, ಇಲ್ಲದಿದ್ದರೆ ಅವರನ್ನೂ ಸ್ಫೋಟಿಸಲಾಗುತ್ತಿತ್ತು . ಅಲ್ಲದೇ, ಪತ್ರ ಕಳುಹಿಸಿದವರು ಗೌಶಾಲಾ ಸಮೀಕ್ಷೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ರಂಜಿತ್ ಬಚ್ಚನ್ ಮತ್ತು ಕಮಲೇಶ್ ತಿವಾರಿ ಹತ್ಯೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಉನ್ನಾವೋದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅದರ ಮೇಲೆ ವಿಳಾಸವನ್ನು ದೇವಬಂದ್ ಎಂದು ಬರೆಯಲಾಗಿದೆ. ಸದ್ಯ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.