ಚೆನ್ನೈ: ಲಿಖಿತ ಪರೀಕ್ಷೆ ಇಲ್ಲದೆಯೇ ಕೇವಲ ಅಂಕಗಳ ಆಧಾರದ ಮೇಲೆ ಭರ್ತಿ ಮಾಡಬಹುದಾದ ಉದ್ಯೋಗಗಳಿಗೆ ನಕಲಿ ಅಂಕಪಟ್ಟಿ ಸಲ್ಲಿಸಿ, ಸಾವಿರಾರು ಅಭ್ಯರ್ಥಿಗಳು ನೇಮಕಗೊಂಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡಿನಲ್ಲಿ ಈ ಪ್ರಕರಣ ನಡೆದಿದ್ದು ಅಲ್ಲಿನ ಶಿಕ್ಷಣ ಇಲಾಖೆಗೆ ಆಘಾತ ಉಂಟಾಗಿದೆ.
ತಮಿಳುನಾಡು ಪರೀಕ್ಷಾ ಇಲಾಖೆಯ ರೀತಿಯಲ್ಲೇ ನಕಲಿ ಅಂಕಪಟ್ಟಿ ಮುದ್ರಿಸಿ, ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಡಿ ವಿವಿಧ ಉದ್ಯೋಗಗಳ ನೇಮಕಾತಿಗೆ ಅಭ್ಯರ್ಥಿಗಳು ಸಲ್ಲಿಸಿದ್ದಾರೆ. ಈ ಅಂಕಪಟ್ಟಿಗಳ ಪರಿಶೀಲನೆಗೋಸ್ಕರ ರಾಜ್ಯ ಪರೀಕ್ಷಾ ಇಲಾಖೆಗೆ ರವಾನೆ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ. ಕೇಂದ್ರ ಸರ್ಕಾರದ ಅಧೀನದ ತೈಲ ಕಂಪನಿ, ಬ್ಯಾಂಕ್‌ಗಳು ಸೇರಿದಂತೆ ಅನೇಕ ಇಲಾಖೆಗಳು ಆಕಾಂಕ್ಷಿಗಳು ನಕಲಿ ಅಂಕಪಟ್ಟಿಗಳನ್ನೇ ನೀಡಿ, ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಕೆಜಿಎಫ್ 2' ಸಿನಿಮಾ ನೋಡಿ ನಟ ಅಲ್ಲು ಅರ್ಜುನ್ ಹೇಳಿದ್ದೇನು?!
ನಕಲಿ ಅಂಕಪಟ್ಟಿಯಲ್ಲಿ ಹಿಂದಿ ಪ್ರಾಥಮಿಕ ಭಾಷೆಯನ್ನಾಗಿ ಮುದ್ರಿಸಲಾಗಿದ್ದು, ಪ್ರಮಾಣಪತ್ರಕ್ಕೆ ಹಿಂದಿ ಭಾಷೆಯಲ್ಲೇ ಅಧಿಕಾರಿಗಳು ಸಹಿ ಹಾಕಿದ್ದಾರೆ. ಆದರೆ, ತಮಿಳುನಾಡು ರಾಜ್ಯ ಪರೀಕ್ಷಾ ಇಲಾಖೆ ನೀಡುವ ಅಂಕಪಟ್ಟಿಯಲ್ಲಿ ತಮಿಳಿನಲ್ಲಿ ಸಹಿ ಮಾಡಲಾಗಿರುತ್ತದೆ. ಇದುವರೆಗೆ 2,500 ಅಭ್ಯರ್ಥಿಗಳ ಪ್ರಮಾಣ ಪತ್ರ ಪರಿಶೀಲನೆಗೊಳಪಟ್ಟಿದ್ದು, ಒಂದು ಸಾವಿರಕ್ಕೂ ಅಧಿಕ ಅಂಕಪಟ್ಟಿ ನಕಲಿ ಎಂದು ಪತ್ತೆಯಾಗಿದೆ.
ನಕಲಿ ಅಂಕಪಟ್ಟಿ ಉತ್ತರ ಪ್ರದೇಶದಲ್ಲಿ ಮುದ್ರಣವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಶೋಧ ಆರಂಭಿಸಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ತಮಿಳುನಾಡು ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ.