ಹೈದರಾಬಾದ್: ಬುದ್ಧಿವಂತಿಕೆ ಇದ್ದರೆ ಯಾವುದೇ ಕೆಲಸದಲ್ಲಿ ಬೇಕಾದರೂ ಸಂಪತ್ತು ಮತ್ತು ಹೆಸರನ್ನು ಗಳಿಸಬಹುದು ಎಂಬುದಕ್ಕೆ ತಮಿಳುನಾಡಿನ ಈ ಆಟೋ ಡ್ರೈವರ್ ಸಾಕ್ಷಿ. ನಿತ್ಯ ಆಟೋ ಓಡಿಸುವ ಈತನ ತಿಂಗಳ ಸಂಪಾದನೆ ಕೇಳಿದರೆ ಹೌಹಾರೋದು ಗ್ಯಾರಂಟಿ. ಬರೀ ಆಟೋ ಮಾತ್ರ ಓಡಿಸದೇ ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ 'ಹಣಕಾಸಿನ' ಪಾಠ ಕೂಡ ಮಾಡುತ್ತಾರೆ.
ಇಷ್ಟೆಲ್ಲಾ ವಿಶೇಷತೆ ಇರುವ ಆಟೋ ಚಾಲಕನ ಹೆಸರು ಅಣ್ಣಾದೊರೈ. ಚೆನ್ನೈ ನಿವಾಸಿ. ಇಲ್ಲಿನ ಐಟಿ ಕಾರಿಡಾರ್ನಲ್ಲಿ ಆಟೋ ಓಡಿಸುತ್ತಾನೆ. ಹೆಚ್ಚೇನೂ ಶಿಕ್ಷಿತನಲ್ಲದೇ ಇದ್ದರೂ, ಯಾವುದೇ ಉದ್ಯಮಿಗಿಂತ ಕಡಿಮೆ ಇಲ್ಲ. ಬಡವನಾಗಿ ಹುಟ್ಟೋದು ತಪ್ಪಲ್ಲ. ಆದರೆ, ಬಡವನಾಗಿ ಸಾಯುವುದು ತಪ್ಪು ಎಂಬ ಮಾತಿನಲ್ಲಿ ಈತ ಅಚಲವಾಗಿ ನಂಬಿಕೆ ಇಟ್ಟುಕೊಂಡಿದ್ದಾನೆ. ಹೀಗಾಗಿ ಬಡತನವನ್ನು ಮೆಟ್ಟಿನಿಂತು ಸಾಧ್ಯತೆಗಳೆಲ್ಲವನ್ನೂ ಮಾಸಿಕ 4 ರಿಂದ 5 ಲಕ್ಷ ಸಂಪಾದನೆ ಮಾಡುತ್ತಾರಂತೆ.
ಅಣ್ಣಾದೊರೈನ ವಿಶೇಷತೆ ಹೀಗಿದೆ: ಅಣ್ಣಾದೊರೈ ಬಡ ಕುಟುಂಬದ ಕುಡಿ. ಚೆನ್ನಾಗಿ ಓದಬೇಕೆನ್ನುವ ಇಚ್ಛೆಗೆ ಆರ್ಥಿಕ ಸಮಸ್ಯೆ ಅಡ್ಡಿಯಾಯಿತು. ಓದು ಅರ್ಧಕ್ಕೆ ಬಿಟ್ಟು ನೌಕರಿ ಗಿಟ್ಟಿಸಿಕೊಳ್ಳಲು ಯತ್ನಿಸಿದ. ಆದರೆ, ಅದೂ ಕೈಗೂಡಲಿಲ್ಲ. ಕೊನೆಗೆ 2009ರಲ್ಲಿ ಡ್ರೈವಿಂಗ್ ಕಲಿತು ಆಟೋ ಓಡಿಸತೊಡಗಿದ. ಕೆಲ ದಿನಗಳ ಬಳಿಕ ತಾನು ನೀಡುತ್ತಿರುವ ಸೇವೆಯಲ್ಲಿ ಬದಲಾವಣೆ ತರಬೇಕು. ಜನರ ಅಗತ್ಯಕ್ಕೆ ತಕ್ಕಂತೆ ಆಟೋವನ್ನು ಸಿದ್ಧಪಡಿಸಬೇಕು ಎಂದು ಯೋಚಿಸಿದ.
ಬಳಿಕ ಚಿಕ್ಕ ಆಟೋವನ್ನು ಆಧುನೀಕರಣಗೊಳಿಸಿದ. ಅದರಲ್ಲಿ ಐಟಿ ಉದ್ಯೋಗಿಗಳಿಗೆ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಲು ಇಂಟರ್ನೆಟ್‌ಗೆ ಸಂಪರ್ಕ ಕಲ್ಪಿಸಿದ. ಬೆಳಗ್ಗೆ ತಿಂಡಿ ತಿನ್ನದೇ ಬರುವ ಪ್ರಯಾಣಿಕರು, ವಿದೇಶಿಗರಿಗೆ ತಿನ್ನಲೆಂದು ಮಿನಿ ಫ್ರಿಡ್ಜ್ ಅಳವಡಿಸಿ, ಅದರಲ್ಲಿ ನೀರು, ತಂಪು ಪಾನೀಯ, ತೆಂಗಿನ ನೀರು, ತಿಂಡಿಯನ್ನು ನೀಡುತ್ತಿದ್ದರು. ಪ್ರಥಮ ಚಿಕಿತ್ಸೆಯ ಕಿಟ್, ಕೊಡೆ, ವೈಫೈ ಸೌಲಭ್ಯ, ಲ್ಯಾಪ್‌ಟಾಪ್, ಐಪಾಡ್, ಟ್ಯಾಬ್, ಟಿವಿ, 35 ನಿಯತಕಾಲಿಕೆಗಳು, ಪತ್ರಿಕೆಗಳು, ಸ್ಯಾನಿಟರಿ ಪ್ಯಾಡ್ಗಳು ಮತ್ತು ಡಸ್ಟ್‌ಬಿನ್ ಅನ್ನು ಆಟೋದಲ್ಲಿ ಇಡಲಾಗಿದೆ.
ಪ್ರೇರಕ ಭಾಷಣಕಾರ ಈ ಆಟೋ ಡ್ರೈವರ್: ಅಣ್ಣಾದೊರೈ ತನ್ನ ಆಟೋ ಹತ್ತಿದವರಿಗೆ ಸುಮ್ಮನೆ ಕೂತು ಸಮಯ ಕಳೆಯುವ ಬದಲು ಪಝಲ್ ಬಿಡಿಸುವ ಮತ್ತು ಜಿಕೆ ಪ್ರಶ್ನೆಗಳಿಗೆ ಉತ್ತರಗಳನ್ನು ಟಿಕ್ ಮಾಡುವ ಟಾಸ್ಕ್ ನೀಡುತ್ತಿದ್ದರು. ಜೊತೆಗೆ ಪ್ರತಿ 10 ದಿನಗಳಿಗೊಮ್ಮೆ ಲಕ್ಕಿ ಡಿಪ್ಸ್ ಡ್ರಾ ನಡೆಸುತ್ತಿದ್ದರು. ಈತನ ಆಟೋದಲ್ಲಿರುವ ಸೌಲಭ್ಯ ಕಂಡು ಕೆಲವು ಪ್ರಯಾಣಿಕರು ಹೆಚ್ಚುವರಿ ಹಣ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದರು.
ಅಂದಹಾಗೆ ಈ ಚಾಲಕ ಉತ್ತಮ ಮಾತುಗಾರ. ವೊಡಾಫೋನ್, ಟೊಯೊಟಾ, ರಾಯಲ್ ಎನ್‌ಫೀಲ್ಡ್, ಹುಂಡೈ, ಇನ್ಫೋಸಿಸ್, ಸೀರಮ್ ಇನ್‌ಸ್ಟಿಟ್ಯೂಟ್, ಫಾಕ್ಸ್‌ಕಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮತ್ತು ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳಿಗೆ ಈತನಿಂದ ಪ್ರೇರಕ ಭಾಷಣ ಮಾಡಿಸುತ್ತಿದ್ದರು. ಇದರಿಂದಲೂ ಅವರು ಹಣ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಇವರು ತಿಂಗಳಿಗೆ 4 ರಿಂದ 5 ಲಕ್ಷ ಮಾಸಿಕವಾಗಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ : 5 ವರ್ಷದಿಂದ ರೋಗಿಯ ಉದರೊಳಗಿರುವ ಚಾಕು.. ಹೊಟ್ಟೆ ನೋವು ಪರೀಕ್ಷೆ ವೇಳೆ ದಂಗಾದ ವೈದ್ಯರು!