ನವದೆಹಲಿ: ಈಗಾಗಲೇ ಕಳಪೆ ವಾಯುಗುಣಮಟ್ಟಕ್ಕೆ ಸಾಕ್ಷಿಯಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಕೊರೊನಾದ ಮೂರನೇ ಅಲೆ ಬೀಸಲು ಪ್ರಾರಂಭವಾಗಿದೆ.
ದೆಹಲಿಯಲ್ಲಿ ಕೋವಿಡ್ನ ಮೊದಲ ದಿನಗಳಿಗೂ ಈಗಿನ ಪರಿಸ್ಥಿತಿಗೂ ಹೋಲಿಸಿದರೆ ಈ ಮೂರನೇ ಅಲೆ ಅತ್ಯಂತ ಭೀಕರವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಮೊದಲ ಬಾರಿಗೆ 7,000 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಶನಿವಾರ 79 ಸಾವುಗಳು ವರದಿಯಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ಸಂಭವಿಸಿರುವ ಅತಿ ಹೆಚ್ಚು ಸಾವು-ನೋವಾಗಿದೆ.
ಆಡಳಿತ ಪಕ್ಷ ಆಮ್ ಆದ್ಮಿ (ಎಎಪಿ) ನಗರದ ಆಸ್ಪತ್ರೆಗಳಲ್ಲಿ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಕೋವಿಡ್ ರೋಗಿಗಳಿಗೆ ಹೋಟೆಲ್ ಅಥವಾ ಇತರ ಸ್ಥಳಗಳಲ್ಲಿ ಹಾಸಿಗೆಯ ವ್ಯವಸ್ಥೆ ಮಾಡಲು ಇನ್ನೂ ಯೋಜನೆ ರೂಪಿಸಿಲ್ಲ. ಕೊರೊನಾದ ಈ ಮೂರನೇ ಹಂತವು ಹಿಂದೆಂದಿಗಿಂತ ಭೀಕರವಾಗಿದೆ. ಆದರೆ ಶೀಘ್ರದಲ್ಲೇ ಸೋಂಕಿತರ ಸಂಖ್ಯೆ ತಗ್ಗಲಿದೆ ಎಂದು ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
ಮಾರ್ಚ್ 1 ರಂದು ಇಟಲಿಯಿಂದ ದೆಹಲಿಗೆ ಹಿಂದಿರುಗಿದ್ದ ಉದ್ಯಮಿಯೊಬ್ಬರಿಗೆ ಸೋಂಕು ತಗುಲಿದ್ದು, ಇದು ನಗರದ ಮೊದಲ ಕೋವಿಡ್ ಕೇಸ್ ಆಗಿತ್ತು. ಜನರ ನಿರ್ಲಕ್ಷ್ಯವೂ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಮಾಸ್ಕ್ ಧರಿಸದಿದ್ದರೆ ಏನೂ ಆಗಲ್ಲ ಎಂದು ಜನ ಭಾವಿಸಿದ್ದಾರೆ, ಇದು ತಪ್ಪು ತಿಳುವಳಿಕೆ. ಲಸಿಕೆ ಅಭಿವೃದ್ಧಿಪಡಿಸುವವರೆಗೆ ಮಾಸ್ಕ್ ಮಾತ್ರವೇ ಕೊರೊನಾಗೆ ಔಷಧಿಯಾಗಿರಲಿದೆ ಎಂದು ಜೈನ್ ಹೇಳಿದರು.