ಜೋಧಪುರ (ರಾಜಸ್ಥಾನ) : ಮನುಷ್ಯನಿಗೆ ಸಂಗೀತ, ನೃತ್ಯ ಕೂಡ ಒಂದು ಔಷಧಿ ಎಂದೇ ಹೇಳಲಾಗುತ್ತದೆ. ಯಾಕೆಂದರೆ, ನೃತ್ಯ, ಹಾಡು ಮನಸ್ಸಿಗೆ ನೆಮ್ಮದಿ ನೀಡುವುದರೊಂದಿಗೆ ನಮ್ಮ ಅಂತಃಶಕ್ತಿಯನ್ನು ಹೆಚ್ಚಿಸುತ್ತದೆ. ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರವೂ ಈ ಸತ್ಯವನ್ನು ಒಪ್ಪುತ್ತದೆ. ಹೀಗಾಗಿಯೇ, ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ ವೈದ್ಯರು ಸಂಗೀತ ಕೇಳಲು, ನೃತ್ಯ ಮಾಡಲು ಸಲಹೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ವೈದ್ಯ ನೃತ್ಯ ಮಾಡುತ್ತಲೇ ಚಿಕಿತ್ಸೆಯನ್ನೂ ನೀಡುತ್ತಾರೆ. 'ಡ್ಯಾನ್ಸಿಂಗ್ ಡಾಕ್ಟರ್' ಎಂದೇ ಹೆಸರುವಾಸಿಯಾಗಿದ್ದಾರೆ.
ರಾಜಸ್ಥಾನದ ಜೋಧಪುರದಲ್ಲಿ ಡಾ.ರಾಜ್ ಧರಿವಾಲ್ ಎಂಬ ಡ್ಯಾನ್ಸಿಂಗ್ ಡಾಕ್ಟರ್ ಇದ್ದಾರೆ. ಮಕ್ಕಳ ತಜ್ಞರಾಗಿರುವ ಇವರು ತಮ್ಮ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಗೆ ಬರುವ ಮಕ್ಕಳಿಗೆ ಔಷಧಿ ಕೊಡುವುದರೊಂದಿಗೆ ಕುಣಿಯಲು ಸಲಹೆ ನೀಡುತ್ತಾರೆ. ಅಷ್ಟೇ ಅಲ್ಲ, ಮಕ್ಕಳೊಂದಿಗೆ ವಿಭಿನ್ನ ನೃತ್ಯದ ಹೆಜ್ಜೆಗಳನ್ನು ಹಾಕುತ್ತಾ ಅವರಿಗೆ ಡ್ಯಾನ್ಸ್ ಮಾಡಲು ಪ್ರೋತ್ಸಾಹಿಸುತ್ತಾರೆ.
ದೇಹದ ಆರೋಗ್ಯಕ್ಕೆ ಡ್ಯಾನ್ಸ್ ಮದ್ದು: 71 ವರ್ಷದ ಡಾಕ್ಟರ್, ನಮ್ಮ ದೇಹವನ್ನು ಆರೋಗ್ಯವಾಗಿಡಲು ನೃತ್ಯಕ್ಕಿಂತ ಉತ್ತಮವಾದ ಚಿಕಿತ್ಸೆ ಇನ್ನೊಂದಿಲ್ಲ ಅಂತಾರೆ. ಇದು ನಮ್ಮ ಸ್ನಾಯುಗಳನ್ನು ಚಲನಶೀಲಗೊಳಿಸುತ್ತದೆ. ಹೀಗಾಗಿ, ಹೆಚ್ಚು ನೃತ್ಯ ಮಾಡಿದಷ್ಟು ಹೆಚ್ಚು ಫಿಟ್ ಮತ್ತು ಸಂತೋಷವಾಗಿರುತ್ತೇವೆ. ಆದ್ದರಿಂದಲೇ ನಮ್ಮ ದಿನಚರಿಯಲ್ಲಿ ನೃತ್ಯವನ್ನೂ ಸೇರಿಸಿಕೊಳ್ಳಬೇಕೆಂದು ಅವರು ಸಲಹೆ ನೀಡುತ್ತಾರೆ. ಇಂದಿಗೂ ಅವರು ದಿನಕ್ಕೆ ಹತ್ತು ಗಂಟೆಗಳ ಕಾಲ ರೋಗಿಗಳನ್ನು ನೋಡುತ್ತಾರೆ. ಇತ್ತ, ಮಕ್ಕಳು ಕೂಡ ತಮ್ಮ ಅನಾರೋಗ್ಯ ಕಾಣಿಸಿಕೊಂಡಾಗ 'ಡ್ಯಾನ್ಸಿಂಗ್ ಡಾಕ್ಟರ್' ಹತ್ತಿರ ಬರಲು ಇಷ್ಟ ಪಡುತ್ತಾರೆ.
ಮದುವೆ ವೇದಿಕೆಯಲ್ಲೂ ಹಜ್ಜೆ: ಈ ಇಳಿವಯಸ್ಸಿನಲ್ಲೂ ಸಂಪೂರ್ಣವಾಗಿ ಫಿಟ್ ಆಗಿರುವ ಡಾ. ಧರಿವಾಲ್, ಮದುವೆ ಕಾರ್ಯಕ್ರಮದ ವೇದಿಕೆ ಮೇಲೂ ಹೆಜ್ಜೆ ಹಾಕಲು ಸೈ. ಈ ವಯಸ್ಸಿನಲ್ಲಿಇವರ ಫಿಟ್ನೆಸ್ ನೋಡಿ ಮದುವೆಗೆ ಬಂದವರೂ ಬೆರಗಾಗುತ್ತಾರೆ. ಇದೇ ಕಾರಣಕ್ಕೆ ಜೋಧಪುರ ಸುತ್ತಮುತ್ತ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 'ಡ್ಯಾನ್ಸಿಂಗ್ ಡಾಕ್ಟರ್’ ಎಂದೇ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಅವಹೇಳನ : ಸುಗಂಧ ದ್ರವ್ಯದ ಜಾಹೀರಾತು ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶ