ಗಾಂಧಿನಗರ: ಜವಳಿ ಕೆಲಸಗಾರನ ಪುತ್ರ ಮತ್ತು ತಂದೆ ಇಲ್ಲದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಇಬ್ಬರೂ ಸಿಎ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಜಿಗರ್ ಜಾಧವ್ ಅವರ ತಂದೆ ಜವಳಿ ಕೆಲಸಗಾರನಾಗಿದ್ದು, ಸಿಎ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಅವರ ತಂದೆ ಪ್ರತಿ ತಿಂಗಳು ಕೇವಲ 10,000 ರೂ. ಸಂಪಾದಿಸುತ್ತಿದ್ದರು. ಅವರ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅವರ ತಾಯಿಯೂ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂತಹ ಸಂಕಷ್ಟದ ನಡುವೆಯೂ ಜಿಗರ್ ಜಾದವ್ ಶ್ರಮವಹಿಸಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಮತ್ತೊಂದೆಡೆ, ತಂದೆ ಇಲ್ಲದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಊರ್ವಶಿ ಪಾಂಡ್ಯ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ತಂದೆ ಆಕೆ ಆರನೇ ತರಗತಿಯಲ್ಲಿದ್ದಾಗ ಮಿದುಳಿನ ರಕ್ತಸ್ರಾವದಿಂದ ನಿಧನರಾಗಿದ್ದರು.
ದಾಹೋದ್ ಪ್ರದೇಶದ ಪುಟ್ಟ ಕುಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಊರ್ವಶಿ, ತನ್ನ ತಾಯಿಯೊಂದಿಗೆ ಸೂರತ್‌ಗೆ ಬಂದಿದ್ದರು. ಕುಟುಂಬವನ್ನು ನಿರ್ವಹಿಸಲು ಅವರ ತಾಯಿ ಟಿಫಿನ್ ವ್ಯಾಪಾರವನ್ನು ಪ್ರಾರಂಭಿಸಿದರು. ಓದಿನಲ್ಲಿ ಮೇಲುಗೈ ಸಾಧಿಸುತ್ತಾ ಹೋದ ಊರ್ವಶಿ ಅವರು ಇದೀಗ ಸಿಎ ಪರೀಕ್ಷೆ ಪಾಸ್ ಮಾಡಿದ್ದಾರೆ. 'CA STAR ' ಸಂಸ್ಥೆ ಇವರಿಬ್ಬರಿಗೂ ಉಚಿತವಾಗಿ ಕೋಚಿಂಗ್ ನೀಡಿದೆ.
ಇದನ್ನೂ ಓದಿ: ತ್ರಿಪುರದ ಬಿದಿರಿನ ಬಾಟಲ್‌ಗೆ ಆಧುನಿಕತೆಯ ಟಚ್! ಹೆಚ್ಚಿದ ಬೇಡಿಕೆ
ನಾನು ನಿಮಗೆ ಸಿಎ ಕಲಿಸುವುದಿಲ್ಲ, ಆದರೆ ನಾನು ನಿಮ್ಮನ್ನು ಸಿಎ ಮಾಡುತ್ತೇನೆ ಎಂದು 'CA STAR ' ಸಂಸ್ಥೆಯ ಮುಖ್ಯಸ್ಥರಾದ ರವಿ ಹೇಳುತ್ತಾರೆ. ರವಿ ಅವರು ಅನೇಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಎ ತರಬೇತಿ ನೀಡಿದ್ದಾರೆ. ಈ ಸಂಸ್ಥೆ ಸೂರತ್‌ನ ದೊಡ್ಡೋಡ್ ರಸ್ತೆಯಲ್ಲಿದೆ. ರಿಕ್ಷಾ ಚಾಲಕರ ಮಕ್ಕಳು, ಕೂಲಿ ಕಾರ್ಮಿಕರ ಮತ್ತು ಕಡಿಮೆ ಆದಾಯ ಕುಟುಂಬದ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ತರಬೇತಿ ಮತ್ತು ವಸತಿ ಒದಗಿಸಲಾಗುತ್ತದೆ.