ಕಲ್ಲಕುರಿಚಿ (ತಮಿಳುನಾಡು): ತನ್ನ ಕಣ್ಮುಂದೆಯೇ ಮಗಳ ಮದುವೆ ನಡೆಸಬೇಕೆಂದು ಆಸೆ ಪಟ್ಟಿದ್ದ ಅಪ್ಪನೋರ್ವ ಅಕಾಲಿಕ ಮರಣ ಹೊಂದಿದ್ದ. ತಂದೆಯ ಈ ಆಸೆಯ ಈಡೇರಿಸುವ ನಿಟ್ಟಿನಲ್ಲಿ ಮಗಳು ತಂದೆಯ ಮೇಣದ ಪ್ರತಿಮೆ ಮುಂದೆ ಹಸೆಮಣೆ ಏರಿದ್ದಾರೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಈ ಅಪರೂಪದ ಮದುವೆ ನಡೆದಿದ್ದು, ವಿವಾಹಕ್ಕೆ ಬಂದಿದ್ದ ಸಂಬಂಧಿಕರು ಭಾವುಕರಾಗಿದ್ದಾರೆ.
ತಿರುಕೋವಿಲೂರು ಸಮೀಪದ ಠಾಣಕನಂದಲ್ ಗ್ರಾಮದ ಮಹೇಶ್ವರಿ ಎಂಬುವವರೇ ತಮ್ಮ ಮದುವೆಯನ್ನು ತಂದೆಯ ಪ್ರತಿಮೆ ಮಾಡಿಕೊಂಡಿದ್ದಾರೆ. ಇವರ ತಂದೆ ಸೆಲ್ವರಾಜ್ (56) ಅನಾರೋಗ್ಯದ ಕಾರಣ ಕಳೆದ ವರ್ಷ ಮಾರ್ಚ್ 3ರಂದು ನಿಧನರಾಗಿದ್ದರು. ಸೆಲ್ವರಾಜ್ಗೆ ತಾನು ಬದುಕಿದ್ದಾಗಲೇ ಮಗಳ ಮದುವೆ ಮಾಡಬೇಕೆಂಬ ಇಚ್ಛೆ ಇತ್ತು. ಇತ್ತ, ತಂದೆಯ ಮೇಲೆ ವಾತ್ಸಲ್ಯ ಹೊಂದಿರುವ ಮಹೇಶ್ವರಿ ತನ್ನ ಮದುವೆಗೆ ತಂದೆ ಇಲ್ಲವೆಂದು ಕೊರಗು ಕಾಡುತ್ತಿತ್ತು.
ಹೀಗಾಗಿ 5 ಲಕ್ಷ ರೂ. ವೆಚ್ಚದಲ್ಲಿ ತಂದೆ ಸೆಲ್ವರಾಜ್ ಮೇಣದ ಪ್ರತಿಮೆಯನ್ನು ಮಾಡಿಸಿದ್ದಾರೆ. ಅದೇ ಪ್ರತಿಮೆಯನ್ನು ಮದುದೆ ಮಂಟಪಕ್ಕೆ ಇರಿಸಿ ಅದರ ಮುಂದೆಯೇ ಶಾಸ್ತ್ರಬದ್ಧವಾಗಿ ಮಹೇಶ್ವರಿ, ಜಯರಾಜ್ ಅವರೊಂದಿಗೆ ವಿವಾಹವಾಗಿದ್ದಾರೆ. ಅಲ್ಲದೇ, ತಂದೆಯ ಮೇಣದ ಪ್ರತಿಮೆಗೆ ಮಹೇಶ್ವರಿ ದಂಪತಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ: ಅಜ್ಜನ ಮೊಬೈಲ್ನಲ್ಲಿ ಗೇಮ್ ಆಡಿ 44 ಲಕ್ಷ ರೂ. ಸ್ವಾಹಾ ಮಾಡಿದ ಮೊಮ್ಮಗ!