ಚಮೋಲಿ (ಉತ್ತರಾಖಂಡ) : ಕಳೆದ ಫೆಬ್ರವರಿಯಲ್ಲಿ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಜಲ ದುರಂತವು 200ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಸಾವಿರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಆದರೆ, ಈ ಜಲಪ್ರವಾಹದಿಂದಾಗಿ ನಾಪತ್ತೆಯಾಗಿದ್ದ ದೇವಿಯ ವಿಗ್ರಹವೊಂದು ಇದೀಗ ದೊರಕಿದೆ. ದೇವಾಲಯದ ಗೋಡೆಗಳೆಲ್ಲಾ ಕುಸಿದು ಬಿದ್ದಿದ್ದರೂ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ಇದೀಗ ಮಣ್ಣಿನಡಿ ದೇವಿಯ ವಿಗ್ರಹ ದೊರೆತಿದೆ.
ದುರ್ಘಟನೆ ಸಂಭವಿಸಿ 2 ತಿಂಗಳ ನಂತರ ಗ್ರಾಮದ ಜನರು ದೇವಸ್ಥಾನದ ಸುತ್ತಲೂ ಅಗೆದಾಗ, ವಿಗ್ರಹ ಸಿಕ್ಕಿದ್ದು, ದೇವಾಲಯದಲ್ಲಿ ಅದೇ ಸ್ಥಳದಲ್ಲಿ ವಿಗ್ರವನ್ನು ಸ್ಥಾಪಿಸಲಾಗಿದೆ. ಇಡೀ ಗ್ರಾಮದ ಜನತೆ ಇದನ್ನು ಪವಾಡವೆಂದು ಹೇಳುತ್ತಿದ್ದು, ಜನರ ಸಂತೋಷಕ್ಕೆ ಪಾರವೇ ಇಲ್ಲ.
"ಈ ದೇವಾಲಯದ ಕುರಿತು ಇಡೀ ಪ್ರದೇಶದಲ್ಲಿ ಸಾಕಷ್ಟು ನಂಬಿಕೆ ಇದೆ. ದೇವಾಲಯದ ವಿಗ್ರಹವು ಕಣ್ಮರೆಯಾದ ದಿನದಿಂದ ಅದರ ಹುಡುಕಾಟವೂ ನಡೆಯುತ್ತಿತ್ತು. ಗ್ರಾಮಸ್ಥರು ಚಿಂತಿತರಾಗಿದ್ದರು. ಆದರೆ, ಈಗ ಇಡೀ ಹಳ್ಳಿಯಲ್ಲಿ ಸಂತೋಷದ ವಾತಾವರಣವಿದೆ" ಎಂದು ಗ್ರಾಮದ ಮುಖ್ಯಸ್ಥೆ ಶೋಭಾ ರಾಣಾ ಹೇಳಿದ್ದಾರೆ.