ಥಾಣೆ (ಮಹಾರಾಷ್ಟ್ರ): ಕ್ಷುಲ್ಲಕ ಕಾರಣಕ್ಕೆ ಬಾಲಕನೊಬ್ಬನನ್ನು ಕೊಲೆ ಮಾಡಿ ಶವ ಹೂತು ಹಾಕಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಯುಷ್ ವೀರೇಂದ್ರ ಝಾ (19), ಮನೋಜ್ ನಾರಾಯಣ ಟೋಪೆ (19), ಸಂತೋಷ್ ಸತ್ಯನಾರಾಯಣ್ ತಾಟಿಪಾಮುಲ್ (21), ಅನಿಕೇತ್ ತುಕಾರಾಂ ಖಾರತ್ (23) ಮತ್ತು ಶಿವಾಜಿ ಧನರಾಜ್ ಮಾನೆ (23) ಬಂಧಿತ ಆರೋಪಿಗಳು. ಕೊಲೆ ಬಳಿಕ ಸುಮಾರು ಮೂರು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಐವರು ಯುವಕರನ್ನು ಭಿವಂಡಿ ಪಟ್ಟಣದ ನಾರ್ಪೋಲಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಭರತ್ ಕಾಮತ್ ಬುಧವಾರ ತಿಳಿಸಿದ್ದಾರೆ.
ಪ್ರತೀಕಾರಕ್ಕಾಗಿ ಯೋಗೇಶ್ ರವಿ ಶರ್ಮಾ (16) ಎಂಬಾತನನ್ನು ಹತ್ಯೆ ಮಾಡಿದ ಆರೋಪ ಈ ಐವರ ಮೇಲಿದೆ. ಗಲಾಟೆ ಬಳಿಕ ಬಾಲಕ ಯೋಗೇಶನನ್ನು ಕೊಲೆ ಮಾಡಿದ ಆರೋಪಿಗಳು, ಆತನ ಶವವನ್ನು ಅಲ್ಲಿಯೇ ಹೂತುಹಾಕಿದ್ದರು. ಬಳಿಕ ಭಯದಿಂದ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ಆದರೆ, ಪ್ರಕರಣದಿಂದ ಜಿಲ್ಲೆ ಬೆಚ್ಚಿ ಬಿದ್ದಿತ್ತು.
ಸ್ನೇಹಿತರ ಮೇಲೆ ಅನುಮಾನ: ''ನ.25ರಂದು ಬಾಲಕ ಯೋಗೇಶ್ ತನ್ನ ತಾಯಿ ಬಳಿ ಸಮೀಪದ ಕ್ರೀಕ್ ಬಳಿ ಹೋಗುವುದಾಗಿ ಹೇಳಿ ತೆರಳಿದ್ದ. ಆದರೆ, ವಾಪಸ್ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೆ ಆತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಸಾಕಷ್ಟು ಹುಡುಕಾಟದ ಬಳಿಕ ಬಾಲಕನ ತಾಯಿಯ ನವೆಂಬರ್ 28 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಂಡಗಳನ್ನು ರಚಿಸಿ ಬಾಲಕನ ಪತ್ತೆಗೆ ಮುಂದಾಗಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆತನ ಸ್ನೇಹಿತರ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಝಾ, ಟೋಪೆ ಮತ್ತು ಖಾರತ್ ಮೇಲೆ ಕಣ್ಣಿಟ್ಟಿದ್ದರು. ಅವರ ಚಲನವಲನಗಳ ಗಮನಿಸಿದ ಪೊಲೀಸರಿಗೆ ಅನುಮಾನ ದಟ್ಟವಾಗಿತ್ತು. ಕೆಲವು ದಿನಗಳ ಹಿಂದೆ ಜಗಳವಾಡಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದರು. ಕರೆದು ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೂ ಮುನ್ನ ಪಾರ್ಟಿ: ಕೊಲೆ ಮಾಡುವ ಉದ್ದೇಶದಿಂದಲೇ ನವೆಂಬರ್ 25 ರಂದು ಐವರು ಆರೋಪಿಗಳು ಥಾಣೆಯ ಕ್ರೀಕ್‌ನ ರೆಟಿಬಂಡರ್ ಪ್ರದೇಶದಲ್ಲಿ ಪಾರ್ಟಿ ಏರ್ಪಡಿಸಿದ್ದರು. ಯೋಗೇಶನನ್ನು ಆಹ್ವಾನಿಸಿದ್ದರು. ಈ ವೇಳೆ ಐವರು ಆರೋಪಿಗಳು ಯೋಗೇಶನನ್ನು ಅಟ್ಟಾಡಿಸಿ ಕೊಲೆ ಮಾಡಿದ್ದರು. ಬಳಿಕ ಹತ್ತಿರದಲ್ಲೇ ಗುಂಡಿ ಅಗೆದು ಸಮಾಧಿ ಮಾಡಿದ್ದರು. ಸದ್ಯ ಬಾಲಕನ ಮೃತ ದೇಹವನ್ನು ಗುಂಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಭರತ್ ಕಾಮತ್ ತಿಳಿಸಿದ್ದಾರೆ. (IANS)
ಇದನ್ನೂ ಓದಿ: ಟಾರ್ಗೆಟ್ ಇಲಿಯಾಸ್ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ