ಚೆನ್ನೈ(ತಮಿಳುನಾಡು): 20 ವಿಷರಹಿತ ಹಾವು, ಎರಡು ಆಮೆ, ಕೋತಿ ಸೇರಿದಂತೆ ವಿವಿಧ ಪ್ರಾಣಿಗಳನ್ನ ಥಾಯ್ಲೆಂಡ್ನಿಂದ ಅಕ್ರಮವಾಗಿ ಸಾಗಣೆ ಮಾಡ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಚೆನ್ನೈನ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆತನಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಿಂದ ಥಾಯ್ ಏರ್ಲೈನ್ಸ್ನಲ್ಲಿ ಇವುಗಳೊಂದಿಗೆ ವ್ಯಕ್ತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು. ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನನ್ನ ರಾಮನಾಥಪುರಂನ ಮೂಲದ ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದೆ. ಇತನ ಮೇಲೆ ಅನುಮಾನ ಬಂದು ಪರಿಶೀಲನೆಗೊಳಪಡಿಸಿದಾಗ ಈ ಪ್ರಾಣಿಗಳು ಇರುವುದು ಪತ್ತೆಯಾಗಿದೆ.
ವ್ಯಕ್ತಿ ತನ್ನೊಂದಿಗೆ ಬುಟ್ಟಿವೊಂದನ್ನ ತೆಗೆದುಕೊಂಡು ಬಂದಿದ್ದನು. ಅದರಲ್ಲಿ ಮಧ್ಯ ಆಫ್ರಿಕಾ, ಉತ್ತರ ಅಮೆರಿಕ, ಸೀಶೆಲ್ಸ್ ದ್ವೀಪಗಳಲ್ಲಿ ವಾಸಿಸುವ ಹಾವು, ಕೋತಿ, ಹೆಬ್ಬಾವು, ಆಮೆ ಸೇರಿದಂತೆ ಇತರೆ ಪ್ರಾಣಿಗಳನ್ನ ತೆಗೆದುಕೊಂಡು ಬಂದಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಕೇಂದ್ರ ಅರಣ್ಯ ಅಪರಾಧ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಆರೋಪಿ ತನ್ನೊಂದಿಗೆ ಉತ್ತರ ಅಮೆರಿಕದ 15 ವಿಷರಹಿತ ಹಾವು, ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ 5 ಮರಿ ಹೆಬ್ಬಾವು, ಕೋತಿ ಸೇರಿದಂತೆ ಒಟ್ಟು 23 ಪ್ರಾಣಿಗಳನ್ನು ತನ್ನೊಂದಿಗೆ ಹೊತ್ತು ತಂದಿದ್ದನು. ಕಸ್ಟಮ್ಸ್ ಅಧಿಕಾರಿಗಳು ಈತನ ವಿಚಾರಣೆಗೊಳಪಡಿಸಿದಾಗ ಕಳೆದ 10 ದಿನಗಳ ಹಿಂದೆ ಥಾಯ್ಲೆಂಡ್ಗೆ ತೆರಳಿ, ಅಲ್ಲಿ ಪ್ರಾಣಿಗಳನ್ನು ಖರೀದಿಸಿರುವುದಾಗಿ ಹೇಳಿದ್ದಾನೆ.
ಇದನ್ನೂ ಓದಿ: ಮೊದಲ ಬಾರಿಗೆ ಚೆನ್ನೈ ಏರ್ಪೋರ್ಟ್ನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ
ವಿದೇಶಗಳಿಂದ ಪ್ರಾಣಿಗಳನ್ನು ತರುವಾಗ ಅಂತಾರಾಷ್ಟ್ರೀಯ ಅರಣ್ಯ ಇಲಾಖೆ, ಅಂತಾರಾಷ್ಟ್ರೀಯ ಆರೋಗ್ಯ ಇಲಾಖೆಯಿಂದ ಪ್ರಮಾಣಪತ್ರ ಪಡೆದುಕೊಳ್ಳುವುದು ಹಾಗೂ ಪ್ರಾಣಿಗಳ ವೈದ್ಯಕೀಯ ಪರೀಕ್ಷೆ ನಡೆಸುವುದು ಕಡ್ಡಾಯ. ಆದರೆ, ಇದೀಗ ತೆಗೆದುಕೊಂಡು ಬಂದಿರುವ ಪ್ರಾಣಿಗಳಿಗೆ ಯಾವುದೇ ದಾಖಲಾತಿ ಇಲ್ಲ. ಹೀಗಾಗಿ, ವಾಪಸ್ ಕಳುಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರ ಜೊತೆಗೆ ಆರೋಪಿಗೆ ದಂಡ ವಿಧಿಸಲು ಮುಂದಾಗಿದ್ದಾರೆ.