ನವದೆಹಲಿ: 2000ನೇ ಇಸ್ವಿಯಲ್ಲಿ ಕೆಂಪುಕೋಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್ ತನಗೆ ಮರಣದಂಡನೆ ವಿಧಿಸಿದ್ದನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ವಿದ್ಯುನ್ಮಾನ ದಾಖಲೆಗಳನ್ನು ಪರಿಗಣಿಸಬೇಕೆಂಬ ಮನವಿಯನ್ನು ನಾವು ಸ್ವೀಕರಿಸಿದ್ದೇವೆ. ಆತನ ಅಪರಾಧ ಸಾಬೀತಾಗಿದೆ. ಈ ನ್ಯಾಯಾಲಯ ತೆಗೆದುಕೊಂಡ ದೃಷ್ಟಿಕೋನವನ್ನು ನಾವು ದೃಢೀಕರಿಸುತ್ತೇವೆ ಮತ್ತು ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸುತ್ತೇವೆ ಎಂದು ಹೇಳಿತು.
ಡಿಸೆಂಬರ್ 22, 2000 ರಂದು ಕೆಂಪು ಕೋಟೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಆಗಸ್ಟ್ 10, 2011 ರಂದು, ಸುಪ್ರೀಂ ಕೋರ್ಟ್ ಆರಿಫ್ ಅವನ ಮರಣದಂಡನೆಯನ್ನು ಎತ್ತಿಹಿಡಿದಿತ್ತು. 2005 ರಲ್ಲಿ ಸೆಷನ್ಸ್ ನ್ಯಾಯಾಲಯವು ಆತನಿಗೆ ನೀಡಿದ್ದ ಮರಣದಂಡನೆ ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದನ್ನು ದೆಹಲಿ ಹೈಕೋರ್ಟ್ ದೃಢೀಕರಿಸಿತ್ತು. ಆದರೆ 2014ರಲ್ಲಿ ಆತನ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಪಾಕಿಸ್ತಾನದ ಅಬೋಟಾಬಾದ್‌ನ ಆರಿಫ್, ದೆಹಲಿಯ ಕೆಂಪು ಕೋಟೆಗೆ ನುಗ್ಗಿ ರಜಪೂತಾನ ರೈಫಲ್ಸ್‌ನ ಏಳನೇ ಬೆಟಾಲಿಯನ್‌ನ ಕಾವಲುಗಾರರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಆರು ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ.
ಇದನ್ನೂ ಓದಿ: ಭಯೋತ್ಪಾದನೆಗೆ ಹಣವೇ ಜೀವಾಳ, ಹಣದ ಹರಿವು ನಿಲ್ಲಿಸಬೇಕಿದೆ: ಜೈಶಂಕರ್