ಹೈದರಾಬಾದ್(ತೆಲಂಗಾಣ): ಜೆಇಇ ಫಲಿತಾಂಶ ಪ್ರಕಟವಾಗಿದ್ದು, ತೆಲುಗು ರಾಜ್ಯಗಳ ವಿದ್ಯಾರ್ಥಿಗಳು ಜಯಭೇರಿ ಬಾರಿಸಿದ್ದಾರೆ. ದೇಶಾದ್ಯಂತ ನಡೆದ ಎರಡು ಸುತ್ತಿನ ಪರೀಕ್ಷೆಗಳಲ್ಲಿ ಶೇ.100ರಷ್ಟು ಅಂಕ ಗಳಿಸಿದ 24 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದವರಾಗಿದ್ದಾರೆ. ಹೌದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ತಲಾ ಐವರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.
ಉಳಿದಂತೆ ರಾಜಸ್ಥಾನದ ನಾಲ್ವರು ವಿದ್ಯಾರ್ಥಿಗಳು ಮತ್ತು ಉತ್ತರ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಸಹ ಈ ಪಟ್ಟಿಯಲ್ಲಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಭಾನುವಾರ ಮುಂಜಾನೆ ಜೆಇಇ ಫಲಿತಾಂಶ ಅನ್ನು ಮೊದಲ ಮತ್ತು ಕೊನೆಯ ಹಂತಗಳಲ್ಲಿನ ಉತ್ತಮ ಅಂಕಗಳನ್ನು ಪರಿಗಣಿಸಿ ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿ ಶ್ರೇಯಾಂಕಗಳನ್ನು ಬಹಿರಂಗಪಡಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ ಮಾತ್ರ ಕಳುಹಿಸಲಾಗಿದೆ.
ಇದರ ಪ್ರಕಾರ ತೆಲಂಗಾಣದ ಧೀರಜ್ ಕುರುಕುಂದ ನಾಲ್ಕನೇ ರ‍್ಯಾಂಕ್‌ನೊಂದಿಗೆ ತೆಲುಗು ರಾಜ್ಯಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಆ ಬಳಿಕ ಪೆನಿಕಲಪತಿ ರವಿಕಿಶೋರ್ಗೆ 6ನೇ ಸ್ಥಾನ, ಹಿಮವಂಶಿಗೆ 7ನೇ ಸ್ಥಾನ, ಅನಿಕೇತ್ ಚಟ್ಟೋಪಾಧ್ಯಾಯಗೆ 8ನೇ ಹಾಗೂ ಪಲ್ಲಿ ಜಲಜಾಕ್ಷಿ ಅವರಿಗೆ 9ನೇ ಸ್ಥಾನ ಸಿಕ್ಕಿದೆ. ಬೋಯಾ ಹರೇನ್ ಸಾತ್ವಿಕ್ 10ನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ವಿಮಾನ ಟಿಕೆಟ್, ಐಫೋನ್ ನೀಡೋದಾಗಿ ವಂಚನೆ... ಮುತ್ತಿನನಗರಿಯಲ್ಲಿ ಬೀಡುಬಿಟ್ಟ ಬೆಳಗಾವಿ ದಂಪತಿ!
ಟಾಪ್ 10 ನಲ್ಲಿ 6 ಮಂದಿ ಮತ್ತು ಟಾಪ್ 25 ರ‍್ಯಾಂಕ್ ಪಟ್ಟಿಯಲ್ಲಿ 12 ಮಂದಿ ತೆಲುಗು ವಿದ್ಯಾರ್ಥಿಗಳಿದ್ದಾರೆ. 2.50 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ಗೆ ಅರ್ಹತೆ ಪಡೆದಿದ್ದಾರೆ. ಅಡ್ವಾನ್ಸ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೋಮವಾರ(ನಿನ್ನೆ) ರಾತ್ರಿ 8 ಗಂಟೆಯಿಂದ ಆರಂಭವಾಗಿದೆ. ವಿದ್ಯಾರ್ಥಿಗಳು ಇದೇ 11ರ ಸಂಜೆ 5ರವರೆಗೆ ಅರ್ಜಿ ಸಲ್ಲಿಸಬಹುದು. ಅಡ್ವಾನ್ಸ್ಡ್ ಪರೀಕ್ಷೆ ಇದೇ 28ರಂದು ನಡೆಯಲಿದೆ.