ಹೈದರಾಬಾದ್: ತೆಲಂಗಾಣ ಮೂಲದ ಸಾಫ್ಟವೇರ್ ಇಂಜಿನಿಯರ್ ಒಬ್ಬರನ್ನು ಅಮೆರಿಕದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಬೆಳಗಿನ ಜಾವ ವಾಕಿಂಗ್ ಹೋದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಸಾಯಿ ಚರಣ್ (26) ಎಂಬುವರು ಭಾನುವಾರ ಬೆಳಗಿನ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತನೊಬ್ಬ ಅವರಿಗೆ ಗುಂಡಿಕ್ಕಿ ಪರಾರಿಯಾಗಿದ್ದಾನೆ.
ಸಾಯಿ ಚರಣ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಎಂಎಸ್ ಪದವಿ ಶಿಕ್ಷಣ ಮುಗಿಸಿದ ನಂತರ ಕಳೆದ ಆರು ತಿಂಗಳಿಂದ ಅವರು ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಾಯಿ ಚರಣ್ ಕೆಲ ದಿನಗಳ ಹಿಂದಷ್ಟೇ ಹೊಸ ಕಾರು ಖರೀದಿಸಿದ್ದರು. ಬೆಳಗಿನ ವಾಕ್ ಮಾಡುವಾಗ ಅವರಿಗೆ ಗುಂಡಿಕ್ಕಲಾಗಿದೆ ಎಂದು ಮೃತರ ತಂದೆ ತಿಳಿಸಿದ್ದಾರೆ.
'ಸಾಯಿ ಚರಣ್ ಮೃತಪಟ್ಟಿರುವುದಾಗಿ ಸೋಮವಾರ ರಾತ್ರಿ ಆತನ ಗೆಳೆಯನೊಬ್ಬರು ನಮಗೆ ಫೋನ್ ಮಾಡಿ ಹೇಳಿದರು. ಇದೇ ತಿಂಗಳು 17ನೇ ತಾರೀಕಿನಂದು ನಾವು ಮಗನೊಂದಿಗೆ ಮಾತನಾಡಿದ್ದೆವು. ನವೆಂಬರ್ನಲ್ಲಿ ಭಾರತಕ್ಕೆ ಬರುವುದಾಗಿ ಆತ ಹೇಳಿದ್ದ' ಎಂದು ಆತನ ತಂದೆ ಕಣ್ಣೀರಿಟ್ಟರು.
ಸಾಯಿ ಚರಣ್ ಮೃತದೇಹವನ್ನು ಭಾರತಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
ಇದನ್ನು ಓದಿ:ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿದ್ದ ಯೋಗ ದಿನಾಚರಣೆ ಸ್ಥಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸ!