ಭಾಗಲ್ಪುರ: ಚೈನಿಸ್ ಅಪ್ಲಿಕೇಶನ್ ಮೂಲಕ ದೆಹಲಿಯಲ್ಲಿ ಕುಳಿತು ಆನ್ಲೈನ್ ಸಾಲ ಒದಗಿಸುತ್ತಿದ್ದ ಕಂಪನಿಯೊಂದರ ನಿರ್ದೇಶಕ ಹೇಮಂತ್ ಜಾ ಎಂಬಾತನ್ನು ಬಂಧಿಸುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರದಂದು ತೆಲಂಗಾಣ, ಭಾಗಲ್ಪುರ್ ಪೊಲೀಸರ ಸಹಯೋಗದೊಂದಿಗೆ ದಾಳಿ ನಡೆದಿದ್ದು, ಇಶಾಚಕಕ್ ಪೊಲೀಸ್ ಠಾಣೆ ಪ್ರದೇಶದಲ್ಲಿದ್ದ ಆತನ ಮನೆಯಿಂದ ಆತನನ್ನು ಬಂಧಿಸಲಾಗಿದೆ.
ಜನರಿಗೆ ಸಾಲ ನೀಡುವ ನೆಪದಲ್ಲಿ ಹೇಮಂತ್ ಜಾ ಸುಮಾರು 2,000 ಕೋಟಿ ರೂ. ವಸೂಲಿ ಮಾಡಿದ್ದಾನೆ. ತೆಲಂಗಾಣ, ಭಾಗಲ್ಪುರ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು, ಇಶಾಚಕಕ್ ಪೊಲೀಸ್ ಠಾಣೆ ಪ್ರದೇಶದ ಸಬ್ಜಿ ಮಂಡಿ ಬಳಿ ಇದ್ದ ಆತನ ಮನೆಯಿಂದಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯಿಂದ ತನ್ನೂರಿಗೆ ಬಂದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: ರೈತರ ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ವಿಚಾರ: ಇಂದು ಸುಪ್ರೀಂಕೋರ್ಟ್ ವಿಚಾರಣೆ
ದಾಳಿ ಸಂದರ್ಭ ಪೊಲೀಸರು ಆರೋಪಿಯಿಂದ ಲ್ಯಾಪ್ಟಾಪ್ ಮತ್ತು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ತೆಲಂಗಾಣದ ಬಶೀರಬಾದ್‌ನ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾದ ನಂತರ ಹೇಮಂತ್ ಬಂಧನಕ್ಕಾಗಿ ದೆಹಲಿ, ನೋಯ್ಡಾ ಸೇರಿದಂತೆ ಹಲವಾರು ನಗರಗಳಲ್ಲಿ ಪೊಲೀಸರು ದಾಳಿ ನಡೆಸಿದ್ದು, ಸದ್ಯ ಇಶಾಚಕಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾನೆ.