ಹೈದರಾಬಾದ್: ತೆಲಂಗಾಣದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಾದ ಸ್ಪರ್ಶಿಸುವ ವಿಡಿಯೋ ಬುಧವಾರ ವೈರಲ್ ಆಗಿದೆ. ಈಗ ಈ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಕೆಲ ಅಧಿಕಾರಿಗಳ ತಪ್ಪು ಪ್ರವೃತ್ತಿಯನ್ನು ಪ್ರಶ್ನಿಸುತ್ತಿವೆ.
ಮಂಗಳವಾರ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ರಾಜ್ಯ ನಿರ್ದೇಶಕ ಜಿ. ಶ್ರೀನಿವಾಸ್ ರಾವ್ ಅವರು ಗೌರವಾರ್ಥವಾಗಿ ಮುಖ್ಯಮಂತ್ರಿಯವರ ಪಾದ ಸ್ಪರ್ಶಿಸುತ್ತಿರುವ ವೀಡಿಯೊವನ್ನು ಟಿವಿ ಚಾನೆಲ್‌ಗಳು ತೋರಿಸಿವೆ.
ನಿವೃತ್ತ ಅಧಿಕಾರಿಗಳು ರಾಜಕೀಯ ಸೇರುವುದು ಅರ್ಥವಾಗುವಂಥದು. ಆದರೆ ಅಧಿಕಾರಿಗಳು ಇನ್ನೂ ಸೇವೆಯಲ್ಲಿರುವಾಗ ಮುಖ್ಯಮಂತ್ರಿಯೊಬ್ಬರ ಪಾದ ಮುಟ್ಟುವ ಪ್ರವೃತ್ತಿ ಸಲ್ಲದು ಎಂದು ಬಿಜೆಪಿ ಮಾಜಿ ಎಂಎಲ್‌ಸಿ ಎನ್. ರಾಮಚಂದರ್ ರಾವ್ ಹೇಳಿದ್ದಾರೆ.
ಏತನ್ಮಧ್ಯೆ ಕೆಲವು ಕಾಂಗ್ರೆಸ್ ನಾಯಕರು ಕಾಲು ಮುಗಿದ ಆರೋಗ್ಯ ಅಧಿಕಾರಿಗೆ ಗುಲಾಬಿ ಶರ್ಟ್ ನೀಡಲು ಪ್ರಯತ್ನಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಧ್ವಜ ಗುಲಾಬಿ ಬಣ್ಣದ್ದಾಗಿರುವುದು ಗಮನಾರ್ಹ. ಕಾಲು ಮುಗಿದ ಆರೋಪಕ್ಕೊಳಗಾಗಿರುವ ಅಧಿಕಾರಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಸಿದ್ದಿಪೇಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ವೆಂಕಟರಾಮ್ ರೆಡ್ಡಿ ಅವರು ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಪಾದ ಮುಟ್ಟಿದಾಗ ಸಾಕಷ್ಟು ವಿವಾದ ಏರ್ಪಟ್ಟಿತ್ತು.
ಇದನ್ನೂ ಓದಿ: ಹುತಾತ್ಮ ಯೋಧರ ತಾಯಂದಿರ ಪಾದ ಮುಟ್ಟಿ ನಮಸ್ಕರಿಸಿದ ರಕ್ಷಣಾ ಸಚಿವೆ ಸೀತಾರಾಮನ್!