ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಸರ್ಕಾರವು ಮುಸ್ಲಿಂ ಧೋಬಿಗಳಿಗೆ ಮತ್ತು ಲಾಂಡ್ರಿ ಅಂಗಡಿಗಳಿಗೆ ತಿಂಗಳಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದೆ. 'ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು, ಮುಸ್ಲಿಂ ಧೋಬಿಗಳು ಮತ್ತು ಲಾಂಡ್ರಿ ಅಂಗಡಿಗಳಿಗೆ ತಿಂಗಳಿಗೆ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸರಬರಾಜು ಯೋಜನೆ ಜಾರಿಗೊಳಿಸುತ್ತಿದೆ' ಎಂದು ಮಂಗಳವಾರ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಲಾಂಡ್ರಿ ವೃತ್ತಿಯಲ್ಲಿ ತೊಡಗಿರುವ ಹಲವಾರು ಮುಸ್ಲಿಂ ಧೋಬಿಗಳಿಗೆ ಉಚಿತ ವಿದ್ಯುತ್ ಅಗತ್ಯವಿದೆ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಇದೀಗ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಮುಸ್ಲಿಂ ಧೋಬಿಗಳಿಗೆ ಮತ್ತು ಲಾಂಡ್ರಿ ಅಂಗಡಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.
ಬಿಜೆಪಿ ಖಂಡನೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಬಂಡಿ ಸಂಜಯ್ ಕುಮಾರ್, ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. "ಮುಸ್ಲಿಂ ಧೋಬಿಗಳು ಮತ್ತು ಲಾಂಡ್ರಿ ಅಂಗಡಿಗಳಿಗೆ 250 ಯುನಿಟ್‌ಗಳ ಉಚಿತ ಯೋಜನೆ ಅನ್ವಯಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸುತ್ತೇವೆ. ಈ ನಡೆಯಿಂದ ಧೋಬಿ ವೃತ್ತಿಯನ್ನೇ ಅವಲಂಬಿಸಿರುವ ರಜಕುಲ ವರ್ಗದವರು ತಮ್ಮ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಒಂದು ಧರ್ಮದ ಓಲೈಕೆಗಾಗಿ ಸಿಎಂ ಪಾರಂಪರಿಕ ವೃತ್ತಿಗಳಿಗೆ ಧಕ್ಕೆ ತರುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಚರ್ಚೆ ವೇಳೆ ಅಮಿತ್ ಶಾ v/s ರಾಹುಲ್ ಗಾಂಧಿ ಒಬಿಸಿ ಮೀಸಲು ವಾಗ್ಯುದ್ಧ