ಹೈದರಾಬಾದ್ : ಟಿಆರ್ಎಸ್ ಸರ್ಕಾರದ 'ರೈತು ಬಂಧು' ಯೋಜನೆಯಡಿ ತೆಲಂಗಾಣದ 61.49 ಲಕ್ಷ ರೈತರು 7,515 ಕೋಟಿ ರೂ. ಆರ್ಥಿಕ ನೆರವು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.
ರೈತು ಬಂಧು ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಸಿಎಂ ಕೆಸಿಆರ್, ಒಂದು ಎಕರೆಗೆ 5000 ರೂ.ನಂತೆ 61.49 ಲಕ್ಷ ರೈತರ 1.52 ಎಕರೆ ಕೃಷಿ ಭೂಮಿಗೆ ಒಟ್ಟು 7,515 ಕೋಟಿ ರೂ. ಹಣ ನೀಡಲಾಗುವುದು. ಈ ಹಣವು ನೇರವಾಗಿ ರೈತರ ಖಾತೆಗೆ ಜಮೆ ಆಗುವುದು ಎಂದು ಹೇಳಿದರು.
ಕೊರೊನಾದಿಂದಾಗಿ ರೈತರಿಗೆ ತೊಂದರೆಯಾಗಬಾರದೆಂದು ಗ್ರಾಮಗಳಲ್ಲೇ ಸರ್ಕಾರ ಖರೀದಿ ಕೇಂದ್ರಗಳನ್ನು ಸ್ಥಾಪಿಸಿತು. ಸರ್ಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಾವತಿಸಿ ರೈತರ ಉತ್ಪನ್ನಗಳನ್ನು ಖರೀದಿಸಿದರೂ ಬೇಡಿಕೆಯ ಕೊರತೆಯಿಂದಾಗಿ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಮಾರಾಟವಾದ ಕಾರಣ ಸರ್ಕಾರ ನಷ್ಟ ಅನುಭವಿಸಿದೆ.
ಆದರೆ, ಈಗ ನೂತನ ಕೃಷಿ ಕಾನೂನುಗಳಡಿಯಲ್ಲಿ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು. ಸರ್ಕಾರವು ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ಸಲಹೆ ನೀಡಿದರು.
ಇದನ್ನೂ ಓದಿ: ಡಿ.29ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಸಂಘಟನೆ ಒಪ್ಪಿಗೆ.. ಆದರೆ, ಪಟ್ಟುಬಿಟ್ಟಿಲ್ಲ..
ರಾಜ್ಯದಲ್ಲಿ 'ನಿಯಂತ್ರಿತ ಕೃಷಿ ನೀತಿ'ಯ ಅಗತ್ಯವಿಲ್ಲ. ಯಾವ ಬೆಳೆಗಳನ್ನು ಬೆಳೆಉಬೇಕು ಎಂಬುದನ್ನು ರೈತರು ಸ್ವತಃ ನಿರ್ಧರಿಸಬೇಕು. ಎಲ್ಲಿ ತಮ್ಮ ಬೆಳೆಗಳಿಗೆ ಹೆಚ್ಚು ಬೆಲೆ ಸಿಗುತ್ತದೋ ಅಲ್ಲಿ ರೈತರು ಮಾರಾಟ ಮಾಡಬೇಕು. ಈ ಕೃಷಿ ನೀತಿ ಉತ್ತಮವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.