ಪಾಟ್ನಾ/ಬಿಹಾರ : ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನ ಮಾನವೀಯ ಕಾರಣಗಳ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪುತ್ರ ಹಾಗೂ ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಮನವಿ ಮಾಡಿದ್ದಾರೆ. ಇದಕ್ಕಾಗಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ 50,000 ಪೋಸ್ಟ್ ಕಾರ್ಡ್‌ಗಳನ್ನ ಕಳುಹಿಸಿದ್ದಾರೆ.
ಈ ಪತ್ರಗಳನ್ನು ತೇಜಸ್ವಿ ಯಾದವ್ ಅಜಾದಿ ಪತ್ರ ಎಂದು ಕರೆದಿದ್ದು, ಲಾಲು ಪ್ರಸಾದ್ ಯಾದವ್ ಬಿಡುಗಡೆಯಾಗುವವರೆಗೂ ಈ ಪತ್ರ ಆಂದೋಲನ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಬಿಹಾರ ಮತ್ತು ಭಾರತಾದ್ಯಂತ ಇರುವ ಲಾಲುಜೀ ಅವರ ಅನುಯಾಯಿಗಳು ಬರೆದ ಈ ಪತ್ರಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಅವರು ಜೈಲಿನಿಂದ ಬಿಡುಗಡೆಯಾಗುವವರೆಗೂ ಈ ಅಭಿಯಾನ ಮುಂದುವರಿಯುತ್ತದೆ ಎಂದು ಹೇಳಿದ್ರು.
ರಾಷ್ಟ್ರಪತಿಗಳ ಭೇಟಿಗೆ ನನಗೆ ಸಮಯ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದ ತೇಜ್ ಪ್ರತಾಪ್ ಯಾದವ್, ಪತ್ರವನ್ನು ಬರೆದು ನಮಗೆ ಕಳುಹಿಸಿ ಎಂದು ಎಲ್ಲರಲ್ಲೂ ತೇಜ್ ಪ್ರತಾಪ್ ಮನವಿ ಮಾಡಿದ್ದಾರೆ. ಆ ಪತ್ರಗಳನ್ನ ರಾಷ್ಟ್ರಪತಿಗಳಿಗೆ ರವಾನಿಸುವುದಾಗಿ ತಿಳಿಸಿದ್ದಾರೆ.
ಭ್ರಷ್ಟಾಚಾರ ಅಪರಾಧದಡಿ ಜೈಲು ಸೇರಿದ್ದ ಲಾಲು ಪ್ರಸಾದ್ ಯಾದವ್ ಅವರನ್ನು ರಾಜ್ಯ ವೈದ್ಯಕೀಯ ಮಂಡಳಿಯ ಸಲಹೆಯ ಮೇರೆಗೆ ರಾಂಚಿಯ ರಾಜೇಂದ್ರ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್)ದಿಂದ ದೆಹಲಿಯ ಏಮ್ಸ್ಗೆ ಸ್ಥಳಾಂತರಿಸಲಾಗಿದೆ. ಲಾಲು ಆರೋಗ್ಯ ತೀರಾ ಹದಗೆಟ್ಟಿದೆ. ಅವರ ಕಿಡ್ನಿ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸಲು ಶಕ್ತವಾಗಿವೆ ಎಂದು ಲಾಲು ಪ್ರಸಾದ್ಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ಉಮೇಶ್ ಪ್ರಸಾದ್ ಕೆಲವು ತಿಂಗಳ ಹಿಂದೆಯೇ ಹೇಳಿದ್ದರು.
ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಡಿಸೆಂಬರ್‌ನಿಂದ ಜೈಲಿನಲ್ಲಿದ್ದ ಲಾಲು ಪ್ರಸಾದ್ ಯಾದವ್ ಅವರಿಗೆ 2018ರಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.