ಚೆನ್ನೈ, ತಮಿಳುನಾಡು: ಸಂಭವಿಸಬೇಕಾಗಿದ್ದ ದೊಡ್ಡ ವಿಮಾನ ಅಪಘಾತವೊಂದು ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಮೀನಂಬಾಕ್ಕಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್ನ ಸಮಯಪ್ರಜ್ಞೆಯಿಂದ 112 ಜೀವಿಗಳು ಬದಕುಳಿದಂತಾಗಿದೆ.
ಹೌದು, ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 105 ಪ್ರಯಾಣಿಕರು ಮತ್ತು 7 ಸಿಬ್ಬಂದಿಯೊಂದಿಗೆ ವಿಮಾನ ಟೇಕ್ ಆಫ್ ಆಗಿತ್ತು. ಇದಾದ ಬಳಿಕ ಆಗಸದ ಮಧ್ಯದಲ್ಲಿ ವಿಮಾನ ಹಾರಾಟ ನಡೆಸಿದಾಗ ತಾಂತ್ರಿಕ ದೋಷವಿರುವುದು ಪೈಲಟ್‌ಗೆ ತಿಳಿದಿದೆ. ಕೂಡಲೇ ಅವರು ಚೆನ್ನೈ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ತುರ್ತಾಗಿ ಇಳಿಯಲು ಅನುಮತಿ ಕೋರಿದರು. ಹೀಗಾಗಿ ವಿಮಾನ ಟೇಕ್ ಆಫ್ ಆದ 20 ನಿಮಿಷದಲ್ಲಿ ಮತ್ತೆ ಚೆನ್ನೈ ಏರ್ಪೋರ್ಟ್ಗೆ ಮರಳಿ ತುರ್ತು ಭೂಸ್ಪರ್ಶ ಮಾಡಿತು.
ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಫ್ಲೈಟ್ ಇಂಜಿನಿಯರ್ ತಜ್ಞರು ತಾಂತ್ರಿಕ ದೋಷ ಸರಿಪಡಿಸಲು ಯತ್ನಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿಮಾನದ ಸಮಸ್ಯೆಯನ್ನು ಸರಿಪಡಿಸಲು ಕಾಲಾವಕಾಶ ತೆಗೆದುಕೊಂಡರು. ಬಳಿಕ ವಿಮಾನ ಸುಮಾರು ಒಂದೂವರೆ ಗಂಟೆ ತಡವಾಗಿ ದುಬೈಗೆ ಹೊರಟಿತು. ಪೈಲಟ್ ಸಕಾಲದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಹಿಡಿದು ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದರಿಂದ ಭಾರಿ ಅವಘಡವೊಂದು ತಪ್ಪಿದ್ದು, ಅದೃಷ್ಟವಶಾತ್ 112 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಘಟನೆ ಬಗ್ಗೆ ದೆಹಲಿಯ ವಿಮಾನ ನಿಲ್ದಾಣ ಪ್ರಾಧಿಕಾರವು ತನಿಖೆಗೆ ಆದೇಶಿಸಿದೆ. ಇದೇ ವೇಳೆ, ದುಬೈನಿಂದ ಟೇಕಾಫ್ ಆಗಿದ್ದ ವಿಮಾನ ತಾಂತ್ರಿಕ ದೋಷದಿಂದ ಲ್ಯಾಂಡ್ ಆದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಂಚಲನ ಮೂಡಿಸಿದ್ದು, ಪ್ರಯಾಣಿಕರು ಗಾಬರಿಗೊಂಡಿದ್ದರು.
ನಿನ್ನೆ (ಜೂನ್ 26) ಬೆಳಗ್ಗೆ ಪ್ರಯಾಣಿಕರು ಚೆನ್ನೈನಿಂದ ದೆಹಲಿಗೆ ಹೋಗಲು 8.30 ರಿಂದ ಕಾಯುತ್ತಿದ್ದರು. ಆದರೆ, ಸಿಂಗಾಪುರದಿಂದ ಚೆನ್ನೈಗೆ ತೆರಳುವ ವಿಮಾನ ತಡವಾಯಿತು. ಅದರಂತೆ ಚೆನ್ನೈನಿಂದ ದೆಹಲಿಗೆ ತೆರಳುವ ವಿಮಾನವೂ ತಡವಾಗಿತ್ತು. ಇದರಿಂದ ಚೆನ್ನೈನಿಂದ ದೆಹಲಿಗೆ ತೆರಳಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ಕೂಡಾ ಕಂಡು ಬಂದಿತು.
ಕೋಪಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಧರಣಿ ಆರಂಭಿಸಿದರು. ಇದರಿಂದ ವಿಮಾನ ನಿಲ್ದಾಣದಲ್ಲಿ ಕೋಲಾಹಲ ಶುರುವಾಗಿತ್ತು. ನಂತರ ವಿಮಾನ ಸಿಬ್ಬಂದಿ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಮಧ್ಯಾಹ್ನ 2.30ಕ್ಕೆ ಪ್ರಯಾಣಿಕರನ್ನು ದೆಹಲಿಗೆ ವಿಮಾನದಲ್ಲಿ ಕಳುಹಿಸುವುದಾಗಿ ವಿಮಾನ ಸಿಬ್ಬಂದಿ ಹೇಳಿದ ನಂತರ ಪ್ರಯಾಣಿಕರು ಪ್ರತಿಭಟನೆ ಕೈಬಿಟ್ಟರು.
ಅಲ್ಲದೇ ತುರ್ತಾಗಿ ದೆಹಲಿಗೆ ತೆರಳಬೇಕಿದ್ದ ಪ್ರಯಾಣಿಕರನ್ನು ವಿಮಾನಯಾನ ಸಿಬ್ಬಂದಿ ತಕ್ಷಣ ಬೇರೆ ಕಂಪನಿಯ ವಿಮಾನದ ಮೂಲಕ ಅವರನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಧರಣಿ ನಡೆಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಕೊಂಚ ಗೊಂದಲದ ವಾತವಾರಣ ನಿರ್ಮಾಣವಾಗಿತ್ತು.
ಓದಿ: ವಿಮಾನದ ಪ್ರಯಾಣಿಕರ ಮಧ್ಯೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬಂಧನ