ಜೆಮ್‌ಶೆಡ್‌ಪುರ (ಜಾರ್ಖಂಡ್): ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಕಲು ಮಾಡುತ್ತಿದ್ದಾಳೆ ಎಂಬ ಶಂಕೆಯ ಮೇರೆಗೆ ಶಿಕ್ಷಕರು ಆಕೆಯ ಬಟ್ಟೆಗಳನ್ನು ಬಿಚ್ಚಿಸಿದ್ದು, ಇದರಿಂದ ನೊಂದ ಬಾಲಕಿ ಮನೆಗೆ ಬಂದು ಬೆಂಕಿ ಹಚ್ಚಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡ್ನ ಜೆಮ್‌ಶೆಡ್‌ಪುರ ಜಿಲ್ಲೆಯಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿದ್ದ ಇಲ್ಲಿನ ಛಾಯಾನಗರದ ಬಾಲಕಿ ಶುಕ್ರವಾರ ಮಧ್ಯಾಹ್ನ ಪರೀಕ್ಷೆ ಬರೆಯಲು ಶಾಲೆಗೆ ಹೋಗಿದ್ದಳು. ಈ ವೇಳೆ ಶಿಕ್ಷಕಿಯೊಬ್ಬರು ಈ ವಿದ್ಯಾರ್ಥಿನಿ ನಕಲು ಮಾಡುತ್ತಿದ್ದಾಳೆ ಎಂದು ಶಂಕಿಸಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿನಿಯನ್ನು ಬೇರೆ ಕೋಣೆಗೆ ಕರೆದೊಯ್ದು, ಅಲ್ಲಿ ಬಟ್ಟೆ ಬಿಚ್ಚಿಸಿ ಶಿಕ್ಷಕಿ ತಪಾಸಣೆ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿನಿಗೆ ಪಾಪಪ್ರಜ್ಞೆ ಮೂಡಿದೆ.
ಶಾಲೆಯಿಂದ ಸಂಜೆ ಮನೆಗೆ ವಾಪಸಾದ ಬಳಿಕ ವಿದ್ಯಾರ್ಥಿನಿ ಶಾಲಾ ಡ್ರೆಸ್ನಲ್ಲೇ ಮೈಮೇಲೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪರಿಣಾಮ ಸುಮಾರು ಶೇ.80ರಷ್ಟು ಸುಟ್ಟಗಾಯಗಳಾಗಿದ್ದು, ಪೋಷಕರು ಎಂಜಿಎಂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಬಾಲಕಿಯ ಸ್ಥಿತಿಯ ಗಂಭೀರವಾಗಿದ್ದ ಕಾರಣ ಅಲ್ಲಿಂದ ಟಾಟಾ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಬಾಲಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಈ ಸಂಬಂಧ ಸೀತಾರಾಮದೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್ ದಂಪತಿ