ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ತರಗತಿಯ ಬೋರ್ಡ್‌ನಲ್ಲಿ ಧಾರ್ಮಿಕ ಘೋಷಣೆ ಬರೆದಿದ್ದಕ್ಕಾಗಿ 10ನೇ ತರಗತಿಯ ವಿದ್ಯಾರ್ಥಿಗೆ ದೈಹಿಕ ಶಿಕ್ಷೆ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾನೆ. ವಿದ್ಯಾರ್ಥಿಯ ಮೇಲೆ ದೈಹಿಕ ಹಲ್ಲೆ ನಡೆಸಿರುವುದರಲ್ಲಿ ಬನಿ ಸರ್ಕಾರಿ ಪ್ರೌಢ ಶಾಲೆಯ ಪ್ರಾಂಶುಪಾಲ (ಬಾನಿ) ಕೂಡ ಆರೋಪಿಯಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಬಂಧನಕ್ಕಾಗಿ ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯ ತಂದೆ ಕುಲದೀಪ್ ಸಿಂಗ್ ಎಂಬುವವರು ತಮ್ಮ ಮಗನನ್ನು ಶಿಕ್ಷಕ ಫಾರೂಕ್ ಅಹ್ಮದ್ ಮತ್ತು ಪ್ರಾಂಶುಪಾಲ ಮೊಹಮ್ಮದ್ ಹಫೀಜ್ ಅವರು ಥಳಿಸಿದ್ದಾರೆ ಎಂದು ಆರೋಪಿಸಿ ಆ.25 ರಂದು ದೂರು ನೀಡಿದ್ದರು. ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ವಿವಿಧ ಸೆಕ್ಷನ್‌ಗಳ ಅಡಿ ಬನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳೀಯ ಎಸ್‌ಎಚ್‌ಒ ನೇತೃತ್ವದ ತಂಡ ಶಾಲೆಯ ಆವರಣಕ್ಕೆ ಭೇಟಿ ನೀಡಿ ಶಿಕ್ಷಕನನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತರಗತಿಯ ಬೋರ್ಡ್ ಮೇಲೆ ಧಾರ್ಮಿಕ ಘೋಷಣೆ ಬರೆದಿದ್ದಕ್ಕೆ ಶಿಕ್ಷಕ ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶನಿವಾರ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಭಟನೆಗೆ ಕಾರಣವಾದ ಈ ಘಟನೆಯ ಬಗ್ಗೆ ತನಿಖೆ ನಡೆಸಲು ಕಠುವಾ ಜಿಲ್ಲಾಧಿಕಾರಿ ರಾಕೇಶ್ ಮಿನ್ಹಾಸ್ ಅವರು ತ್ರಿಸದಸ್ಯ ಸಮಿತಿ ರಚಿಸಿದ್ದಾರೆ. ಜಿಲ್ಲಾಧಿಕಾರಿಗಳು ರಚಿಸಿರುವ ಸಮಿತಿಯು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಬಾನಿ, ಉಪ ಮುಖ್ಯ ಶಿಕ್ಷಣಾಧಿಕಾರಿ ಕಠುವಾ ಮತ್ತು ಪ್ರಾಂಶುಪಾಲ ಸರ್ಕಾರಿ ಪ್ರೌಢ ಶಾಲೆಯ ಖರೋಟೆ ಸದಸ್ಯರಾಗಿರುತ್ತಾರೆ.
ಸಮಿತಿಯ ಸದಸ್ಯರಿಗೆ ವಿಷಯದ ಕುರಿತು ತನಿಖೆ ನಡೆಸಲು ಮತ್ತು ಎರಡು ದಿನಗಳೊಳಗೆ ಕಚೇರಿಗೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ. ಇದಲ್ಲದೇ, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಿತಿಗೆ ನಿರ್ದೇಶಿಸಲಾಗಿದೆ ಎಂದು ಮಿನ್ಹಾಸ್ ಆದೇಶದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ 2 ನೇ ತರಗತಿಯ ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಘಟನೆಯು ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ನಡೆದಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡನೆ ವ್ಯಕ್ತಪಡಿಸಿದ್ದರು.
ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖುಬ್ಬಾಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಪ್ರಾಥಮಿಕ ತನಿಖೆಯಲ್ಲಿ, 'ತರಗತಿ ಸರಿಯಾಗಿ ಪೂರ್ಣಗೊಳಿಸದ ಹಿನ್ನೆಲೆ ಹಾಗೂ ತರಗತಿಗೆ ಸರಿಯಾಗಿ ಹಾಜರಾಗದ ಹಿನ್ನೆಲೆ ವಿದ್ಯಾರ್ಥಿಗೆ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್: ದ್ವೇಷ ಹರಡಲು ಬಿಜೆಪಿ ಕಾರಣ ಎಂದ ರಾಹುಲ್, ಪ್ರಿಯಾಂಕಾ