ಸೇಲಂ(ತಮಿಳುನಾಡು): ನೀಟ್ ಪರೀಕ್ಷೆಯಲ್ಲಿ (NEET Exam) ಕಡಿಮೆ ಅಂಕಗಳನ್ನು ಪಡೆದ ಕಾರಣದಿಂದ ಬೇಸತ್ತ ಮೆಡಿಕಲ್ ಕೋರ್ಸ್ ಆಕಾಂಕ್ಷಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಸೇಲಂನ ವಡಗುಮರೈ ಗ್ರಾಮದವನಾದ ಸುಭಾಷ್‌ಚಂದ್ರ ಬೋಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೆಂಬರ್ 1ರಂದು ಈತ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಪೋಷಕರು ಆತನನ್ನು ಅತೂರ್ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.
ನಂತರ ವೈದ್ಯರ ಸಲಹೆಯ ಮೇರೆಗೆ ಬೋಸ್ನನ್ನು ಸೇಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೋಸ್ ಶನಿವಾರ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ತಮಿಳುನಾಡಿನಲ್ಲಿ ಈವರೆಗೂ ನೀಟ್ ಪರೀಕ್ಷೆ ಬರೆದಿದ್ದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರೈಲು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ದುರ್ಮರಣ