ಚೆನ್ನೈ: ದೇಶದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಕೃತಕ ಬುದ್ಧಿಮತ್ತೆಯ ಚಾಟ್ ಜಿಪಿಟಿಯ ತಂತ್ರಜ್ಞಾನ ಕಲಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಲಿಕಾ ಯೋಜನೆಯು ಡಿಎಂಕೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ತಂತ್ರಜ್ಞಾನ ಶಿಕ್ಷಣ ಮತ್ತು ಕಲಿಕೆ ಬೆಂಬಲ (TEALS) ಕಾರ್ಯಕ್ರಮದ ಭಾಗವಾಗಿದೆ. ಈ ಕಾರ್ಯಕ್ರಮಕ್ಕೆ ಅಮೆರಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಹಯೋಗ ಹೊಂದಿದೆ.
"ಕಳೆದ ಜುಲೈನಲ್ಲಿ ತಮಿಳುನಾಡು ಸರ್ಕಾರವು ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆರಂಭದಲ್ಲಿ ರಾಜ್ಯದ 14 ಶಾಲೆಗಳಲ್ಲಿ ಈ ಯೋಜನೆ ಅನುಷ್ಟಾನವಾಗಲಿದೆ. ಮುಂದಿನ ಹಂತದಲ್ಲಿ ರಾಜ್ಯಾದ್ಯಂತ 100 ಶಾಲೆಗಳಲ್ಲಿ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ಕೆಲಸ ನೀಡಲು ತರಬೇತಿ ನೀಡಲಾಗುವುದು" ಎಂದು ಶಾಲಾ ಶಿಕ್ಷಣ ಸಚಿವ ಅನ್ಭಿಲ್ ಮಹೇಶ್ ಪೊಯ್ಯಮಾಳಿ ತಿಳಿಸಿದರು.
'ಈಟಿವಿ ಭಾರತ್'ನೊಂದಿಗೆ ಮಾತನಾಡಿರುವ ಮೈಕ್ರೋಸಾಫ್ಟ್ ಕಂಪನಿಯ ದತ್ತಾಂಶ ಮತ್ತು ಎಐ ನಿರ್ದೇಶಕ ಸುಶೀಲ್ ಎಂ.ಸುಂದರ್, "ತಮಿಳುನಾಡು ಸರ್ಕಾರ ಮತ್ತು ಮೈಕ್ರೋಸಾಫ್ಟ್ನ ಒಡಂಬಡಿಕೆಯಂತೆ TEALS ಯೋಜನೆ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿ ಇಂಥ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಕುರಿತು ಮೈಕ್ರೋಸಾಫ್ಟ್ ಶಿಕ್ಷಣ ನೀಡಲಿದೆ. ಆರಂಭದಲ್ಲಿ 14 ಶಾಲೆಗಳಲ್ಲಿ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಬೇಸಿಕ್ ಕೋರ್ಸ್ ಪರಿಚಯಿಸಲಾಗುವುದು. ಬಳಿಕ 100 ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಎಐ ಕೌಶಲ್ಯದ ಕಲಿಕೆಯಿಂದ ವಿದ್ಯಾರ್ಥಿಗಳು ಜಾಗತಿಕವಾಗಿ ಎಲ್ಲಿಯಾದರೂ ಉದ್ಯೋಗ ಕಂಡುಕೊಳ್ಳಬಹುದು".
"ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಇದನ್ನು ಕಲಿಸುವುದರಿಂದ ಉದ್ಯಮಶೀಲತೆ ಹೆಚ್ಚಲು ಕಾರಣವಾಗಲಿದೆ. ಇದಕ್ಕನುಗುಣವಾದ ವ್ಯವಸ್ಥೆ ಮತ್ತು ಕೌಶಲ್ಯಗಳು ಅಭಿವೃದ್ಧಿ ಹೊಂದಿದಾಗ ಸ್ಥಳೀಯ ಆರ್ಥಿಕತೆಯೂ ಬೆಳೆಯುತ್ತದೆ. ಇದು ದೀರ್ಘಾವದಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಮಕ್ಕಳ ಈ ಕಲಿಕೆಗೆ ಪೋಷಕರು ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು. ಸರ್ಕಾರಿ ಶಾಲೆಗಳು ಈ ರೀತಿ ಸಹಯೋಗ ನಡೆಸುವ ಮೂಲಕ ವಿದ್ಯಾರ್ಥಿಗಳು ಜಾಗತಿಕ ನಾಯಕರಾಗಲು ಸಹಾಯವಾಗಲಿದೆ. ಸದ್ಯ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಐ ಕಲಿಸಲಾಗುವುದು. ಇದಕ್ಕಾಗಿ ಈಗಾಗಲೇ ಎಐ ವಿನ್ಯಾಸ ಮಾಡಲಾಗಿದೆ" ಎಂದರು.
ಇದನ್ನೂ ಓದಿ: ಆ್ಯಪಲ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾದ ಮೈಕ್ರೊಸಾಫ್ಟ್