ಚೆನ್ನೈ , ತಮಿಳುನಾಡು: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಕ್ಷಮಿಸಿ, ಅವರನ್ನು ಜೈಲಿನಿಂದ ಬಿಡುಗಡೆಗೊಳ್ಳಲು ಅನುಮತಿ ನೀಡಬೇಕೆಂದು 2018ರ ಸೆಪ್ಟೆಂಬರ್ನಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಸಲ್ಲಿಸಿದ್ದ ಶಿಫಾರಸ್ಸನ್ನು ಅಂಗೀಕರಿಸಬೇಕೆಂದು ಸಿಎಂ ಸ್ಟಾಲಿನ್ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ರಾಷ್ಟ್ರಪತಿಗೆ ಪತ್ರ ಬರೆದಿರುವ ಸ್ಟಾಲಿನ್ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳು ಸುಮಾರು ಮೂರು ದಶಕಗಳಿಂದ ಜೈಲುವಾಸದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಸೂಚಿಸಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.
ಅಪರಾಧಿಗಳಾದ ಎಸ್.ನಳಿನಿ, ಮುರುಗನ್, ಸಂತನ್, ಎ.ಜಿ. ಪೆರರಿವಾಲನ್, ಜಯಕುಮಾರ್, ರಾಬರ್ಟ್ ಪಯಾಸ್, ಮತ್ತು ಪಿ.ರವಿಚಂದ್ರನ್ ಅವರ ಹೆಸರನ್ನು ಉಲ್ಲೇಖಿಸಿರುವ ಸ್ಟಾಲಿನ್ ನಳಿನಿ ಮತ್ತು ಮೂವರ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಈ ಮೊದಲೇ ಜೀವಾವಧಿ ಶಿಕ್ಷೆಗೆ ಇಳಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಸನಿಹದಲ್ಲೇ ಚೀನಾದಿಂದ ಹೆದ್ದಾರಿ ನಿರ್ಮಾಣ
ತಮಿಳುನಾಡಿನ ಬಹುಪಾಲು ರಾಜಕೀಯ ಪಕ್ಷಗಳು ಎಲ್ಲಾ 7 ಅಪರಾಧಿಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸಿ, ತಕ್ಷಣ ಬಿಡುಗಡೆ ಮಾಡುವಂತೆ ವಿನಂತಿಸುತ್ತಿವೆ. ಇದು ತಮಿಳುನಾಡು ಜನರ ಇಚ್ಛೆಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಜೀವ್ ಗಾಂಧಿ ಹತ್ಯೆ ವಿಚಾರದಲ್ಲಿ ಸಿಬಿಐನ ಮಲ್ಟಿ-ಡಿಸಿಪ್ಲಿನರಿ ಮಾನಿಟರಿಂಗ್ ಏಜೆನ್ಸಿಯ ತನಿಖೆಯ ಬಾಕಿ ಉಳಿದಿದ್ದು, ಶಿಕ್ಷೆಗೆ ಕ್ಷಮೆ ನೀಡಿದ ಮೇಲೆಯೂ ತನಿಖೆ ಮುಂದುವರೆಯಬಹುದು. ಎರಡರ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸುವಲ್ಲಿ ಸಾಕಷ್ಟು ವಿಳಂಬವಾಗಿದೆ. ಈಗಾಗಲೇ ಅವರು ಭಾರಿ ಬೆಲೆ ತೆತ್ತಿದ್ದಾರೆ ಎಂದು ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.