ಉದಯಪುರ (ರಾಜಸ್ಥಾನ್): ನಾಥದ್ವಾರದಲ್ಲಿ ವಿಶ್ವದ ಅತಿ ದೊಡ್ಡ ಶಿವನ ವಿಗ್ರಹದ (ನಾಥದ್ವಾರ ವಿಶ್ವಾಸ ಸ್ವರೂಪಂ) ಉದ್ಘಾಟನಾ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ. 369 ಅಡಿ ಎತ್ತರದ ಬೃಹತ್ ಶಿವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯ ವಿಜೃಂಭಣೆಯಿಂದ ಸಾಗಿದೆ. ಸಂಪೂರ್ಣ 9 ದಿನಗಳ ಕಾಲ ಉದ್ಘಾಟನಾ ಸಮಾರಂಭ ನಡೆಯಲಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂತ ಕೃಪಾ ಸನಾತನ ಸಂಸ್ಥಾನ ಆಯೋಜಿಸಿರುವ ತತ್ತಪದಮ್ ಉಪ್ವಾನ್ ಮತ್ತು ರಾಮ್ ಕಥಾ ಮಹೋತ್ಸವ ಮತ್ತು ಗಣೇಶ ಟೇಕ್ರಿಯಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯ ಉದ್ಘಾಟನೆಯಲ್ಲಿ ಭಾಗವಹಿಸಲು ಸಂತ ಮೊರಾರಿ ಬಾಪು ಈಗಾಗಲೇ ನಾಥದ್ವಾರವನ್ನು ತಲುಪಿದ್ದಾರೆ.
51 ಬಿಘಾ ಬೆಟ್ಟದ (ಸುಮಾರು 17 ಎಕರೆ ಪ್ರದೇಶ) ಮೇಲೆ ನಿರ್ಮಿಸಲಾದ ಈ ಪ್ರತಿಮೆಯಲ್ಲಿ ಶಿವನು ಧ್ಯಾನದ ಭಂಗಿಯಲ್ಲಿ ಕುಳಿತಿದ್ದಾನೆ (ವಿಶ್ವಸ್ವರೂಪ ಅನಾವರಣ). 20 ಕಿಲೋಮೀಟರ್ ದೂರದಿಂದ ಗೋಚರಿಸುವ ಈ ಪ್ರತಿಮೆಯು ರಾತ್ರಿಯೂ ಸಹ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರತಿಮೆಯನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯ ಉದ್ಘಾಟನಾ ಉತ್ಸವವನ್ನು ವೀಕ್ಷಿಸಲು ದೇಶ ಮತ್ತು ವಿದೇಶಗಳಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ನಾಥದ್ವಾರವನ್ನು ತಲುಪಿದ್ದಾರೆ. ಮೊರಾರಿ ಬಾಪು ಅವರು ಶನಿವಾರ ಸಂಜೆ 4 ಗಂಟೆಗೆ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗಮನ: ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದ ಮೂಲಕ ಉದಯಪುರದ ದಬೋಕ್ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಇಲ್ಲಿಂದ ಹೆಲಿಕಾಪ್ಟರ್ ಮೂಲಕ ನಾಥದ್ವಾರಕ್ಕೆ ತೆರಳಲಿದ್ದಾರೆ. ಅಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮತ್ತೆ 5.50ಕ್ಕೆ ಹೆಲಿಕಾಪ್ಟರ್ ಮೂಲಕ ದಾಬೋಕ್ ವಿಮಾನ ನಿಲ್ದಾಣ ತಲುಪಿ, ಸಂಜೆ 6 ಗಂಟೆಗೆ ವಿಶೇಷ ವಿಮಾನದ ಮೂಲಕ ಅಹಮದಾಬಾದ್ಗೆ ತೆರಳಲಿದ್ದಾರೆ.
ಗಣ್ಯರ ದಂಡು ಸಮಾರಂಭದಲ್ಲಿ ಭಾಗಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಲ್ಲದೇ, ವಿಧಾನಸಭೆ ಸ್ಪೀಕರ್ ಡಾ. ಸಿಪಿ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಡಾ. ಸತೀಶ್ ಪುನಿಯಾ, ವಿರೋಧ ಪಕ್ಷದ ನಾಯಕ ರಾಜೇಂದ್ರಸಿಂಗ್ ರಾಥೋಡ್, ಆರ್‌ಟಿಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್, ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಯಾದವ್, ಗುಲಾಬ್‌ಚಂದ್ ಕಟಾರಿಯಾ, ಚಿದಾನಂದ ಸ್ವಾಮಿ, ಯೋಗ ಗುರು ಬಾಬಾ ರಾಮ್‌ದೇವ್, ರಾಜಸಮಂದ್ ಸಂಸದೆ ದಿಯಾ ಕುಮಾರಿ, ಚಿತ್ತೋಡಗಢ ಸಂಸದ ಸಿ.ಪಿ. ಜೋಶಿ ಮೊದಲಾದವರು ಶನಿವಾರ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಸಾಂಸ್ಕೃತಿಕ ಸಂಜೆಯ ಮೆರುಗು: ಸಂತ ಕೃಪಾ ಸನಾತನ ಸಂಸ್ಥಾನವು ಒಂಬತ್ತು ದಿನಗಳ ರಾಮಕಥೆಯ ಜತೆಗೆ ನಾಲ್ಕು ದಿನಗಳ ಸಾಂಸ್ಕೃತಿಕ ಸಂಜೆಯನ್ನು ಆಯೋಜಿಸಲಿದೆ. ನವೆಂಬರ್ 2 ರಿಂದ ಸಾಂಸ್ಕೃತಿಕ ಸಂಜೆ ಆರಂಭವಾಗಲಿದೆ. ನವೆಂಬರ್ 2 ರಂದು ಗುಜರಾತಿ ಕಲಾವಿದ ಸಿದ್ಧಾರ್ಥ್ ರಾಂಧೇಡಿಯಾ, ನವೆಂಬರ್ 3 ರಂದು ಹಂಸರಾಜ್ ರಘುವಂಶಿ ಅವರು ತಮ್ಮ ಪ್ರಸ್ತುತಿಯ ಮೂಲಕ ಶಿವನ ಚೈತನ್ಯ ವ್ಯಕ್ತಪಡಿಸಲಿದ್ದಾರೆ.
ನವೆಂಬರ್ 4 ರಂದು ಅಖಿಲ ಭಾರತ ಕವಿ ಸಮ್ಮೇಳನ ನಡೆಯಲಿದೆ. ಇದರಲ್ಲಿ ಕವಿ ಕುಮಾರ್ ವಿಶ್ವಾಸ್ ಹಾಗೂ ಇತರ ಖ್ಯಾತ ಕವಿಗಳು ಭಾಗವಹಿಸಲಿದ್ದಾರೆ. ನವೆಂಬರ್ 5 ರಂದು ಸಾಂಸ್ಕೃತಿಕ ಸಂಜೆಯ ಕೊನೆಯ ದಿನದಂದು ಗಾಯಕ ಕೈಲಾಶ್ ಖೇರ್ ಸ್ವರ ಲಹರಿ ಹರಿಸಲಿದ್ದಾರೆ.
ವಿಶ್ವ ಸ್ವರೂಪದ ಒಂದು ನೋಟ: ವಿಶ್ವದ ಅತಿ ಎತ್ತರದ ಶಿವನ ವಿಗ್ರಹ ತನ್ನದೇ ಆದ ವಿಭಿನ್ನ ವೈಶಿಷ್ಟ್ಯ ಹೊಂದಿದೆ, 369 ಅಡಿ ಎತ್ತರದ ಈ ಪ್ರತಿಮೆ ವಿಶ್ವದ ಇಂಥ ಏಕೈಕ ಪ್ರತಿಮೆಯಾಗಲಿದೆ. ಇದರಲ್ಲಿ ಭಕ್ತರಿಗಾಗಿ ಲಿಫ್ಟ್, ಮೆಟ್ಟಿಲು, ಹಾಲ್ ಮಾಡಲಾಗಿದೆ. ಪ್ರತಿಮೆಯ ಒಳಗೆ ಹೋಗಲು 4 ಲಿಫ್ಟ್‌ಗಳು ಮತ್ತು ಮೂರು ಮೆಟ್ಟಿಲುಗಳಿವೆ. ಪ್ರತಿಮೆಯ ನಿರ್ಮಾಣಕ್ಕೆ 10 ವರ್ಷ ತೆಗೆದುಕೊಂಡಿದೆ. 3000 ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಟನ್ ಘನ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದೆ.
250 ವರ್ಷಗಳ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಮೆಯನ್ನು ನಿರ್ಮಿಸಲಾಗಿದೆ. 250 ಕಿ.ಮೀ ವೇಗದಲ್ಲಿ ಬೀಸುವ ಗಾಳಿ ಕೂಡ ವಿಗ್ರಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪ್ರತಿಮೆಯ ವಿನ್ಯಾಸದ ಗಾಳಿ ಸುರಂಗ ಪರೀಕ್ಷೆಯನ್ನು (ಎತ್ತರದಲ್ಲಿ ಗಾಳಿ) ಆಸ್ಟ್ರೇಲಿಯಾದಲ್ಲಿ ಮಾಡಲಾಗಿದೆ. ಮಳೆ ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು, ಸತು ಮತ್ತು ತಾಮ್ರವನ್ನು ಲೇಪಿಸಲಾಗಿದೆ. ಪ್ರತಿಮೆಯನ್ನು ತತ್ ಪದಮ್ ಸಂಸ್ಥಾನ ನಿರ್ಮಿಸಿದೆ.
ಬೃಹತ್ ಶಿವ ಮೂರ್ತಿ ಸ್ಥಳದಲ್ಲಿನ ಕೆಲ ವಿಶೇಷಗಳು ಹೀಗಿವೆ:
- ಮೂರ್ತಿಯ ಸ್ಥಳದ ಹೆಸರು ತತ್ಪದಂ ಉಪವನ್.
- 44 ಸಾವಿರ ಚದರಡಿಯಲ್ಲಿ ಉದ್ಯಾನಗಳು.
- 52 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಗಿಡಮೂಲಿಕೆಗಳ ತೋಟ.
- ವಿವಿಧ ರೀತಿಯ ಗಿಡಮೂಲಿಕೆಗಳ ಮರಗಳನ್ನು ನೆಡಲಾಗುತ್ತಿದೆ.
- ನಾಥದ್ವಾರ ನಗರದ ಗಣೇಶ ಟೆಕ್ರಿಯಲ್ಲಿ ನಿರ್ಮಿಸಲಾದ ಈ ಶಿವನ ಪ್ರತಿಮೆಗೆ 110 ಅಡಿ ಎತ್ತರದ ತಳಹದಿಯನ್ನು ಮಾಡಲಾಗಿದೆ.
- ವಿಗ್ರಹದ ಒಟ್ಟು ಉದ್ದ 369 ಅಡಿ. ಶಿವನ ಪ್ರತಿಮೆಯ ಕೆಲಸದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.
- ಎತ್ತರದಲ್ಲಿರುವುದರಿಂದ, ಗಾಳಿಯ ವೇಗ ಮತ್ತು ಭೂಕಂಪದ ಗರಿಷ್ಠ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಪ್ರತಿಮೆಯನ್ನು ನಿರ್ಮಿಸಲಾಗಿದೆ.
- 250 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ ಪ್ರತಿಮೆಯ ಮೇಲೆ ಒತ್ತಡ ಇರುವುದಿಲ್ಲ.
- ಭೂಕಂಪದ ಗಾಳಿಯ ವೇಗ ಸೇರಿದಂತೆ ಸುರಕ್ಷತೆಯನ್ನು ತೆಗೆದುಕೊಳ್ಳಲಾಗಿದೆ.
- 20 ಕಿ.ಮೀ ದೂರದಲ್ಲಿರುವ ಕಂಕ್ರೋಲಿ ಮೇಲ್ಸೇತುವೆಯಿಂದ ಇದು ಗೋಚರಿಸುತ್ತದೆ.
ವಿಶಾಲ ಮೂರ್ತಿಯ ವಿಶೇಷಗಳು:
- ಪ್ರತಿಮೆಯ ತೂಕ ಸುಮಾರು 30 ಸಾವಿರ ಟನ್.
- ತ್ರಿಶೂಲವನ್ನು 315 ಅಡಿ ಎತ್ತರಕ್ಕೆ ನಿರ್ಮಿಸಲಾಗಿದೆ
- ಮಹಾದೇವನ ಜಡೆಯ ಎತ್ತರ 16 ಅಡಿ
- 18 ಅಡಿ ಉಕ್ಕಿನ ಗಂಗೆ
- ಮಹಾದೇವನ ಮುಖ 60 ಅಡಿ ಎತ್ತರ
- 275 ಅಡಿ ಎತ್ತರದಲ್ಲಿ ಕುತ್ತಿಗೆ
- 260 ಅಡಿ ಎತ್ತರದಲ್ಲಿ ಭುಜ
- 175 ಅಡಿ ಎತ್ತರದಲ್ಲಿ ಮಹಾದೇವನ ಸೊಂಟದ ಪಟ್ಟಿ
- ಪಾದದಿಂದ ಮೊಣಕಾಲಿನವರೆಗೆ ಎತ್ತರ 150 ಅಡಿ
- 65 ಅಡಿ ಉದ್ದದ ಪಾದ. ಇಲ್ಲಿ ಜನ ಪಾದಗಳನ್ನು ಪೂಜಿಸಬಹುದು
- 280 ಅಡಿ ಎತ್ತರದಲ್ಲಿ ಕಿವಿಯಿಂದ ಕಿವಿಗೆ ಗಾಜಿನ ಸೇತುವೆ
- ಉಕ್ಕಿನ ರಾಡ್‌ನ ಮಾಡ್ಯೂಲ್‌ನ ಸಹಾಯದಿಂದ ಪ್ರತಿಮೆಯನ್ನು ಮಾಡಲಾಗಿದೆ.
- ಪ್ರತಿ ಒಂದು ಅಡಿ ಸ್ಟೀಲ್‌ನಲ್ಲಿ ಬಾರ್‌ಗಳ ಸಹಾಯದಿಂದ ರಚನೆಯನ್ನು ಸಿದ್ಧಪಡಿಸಿ ಅದರಲ್ಲಿ ಕಾಂಕ್ರೀಟ್ ಅನ್ನು ಸಿದ್ಧಪಡಿಸಲಾಗಿದೆ.
ನಿತ್ಯ ಒಂದು ಲಕ್ಷ ಮಂದಿಗೆ ಅನ್ನ ಪ್ರಸಾದ: ರೆಸ್ಟೊರೆಂಟ್ನ ಸಿದ್ಧತೆ ನೋಡಿದರೆ ಇಲ್ಲಿ ನಿತ್ಯ ಲಕ್ಷಗಟ್ಟಲೆ ಜನ ಅನ್ನ ಪ್ರಸಾದ ಸ್ವೀಕರಿಸುತ್ತಾರೆ ಎಂಬುದು ತಿಳಿಯುತ್ತದೆ. ಸೇವಾ ಕೌಂಟರ್‌ಗೆ ವಸ್ತುಗಳನ್ನು ತಲುಪಿಸಲು, ಓವರ್‌ಹೆಡ್ ಕನ್ವೇಯರ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಜನತೆ ಇಲ್ಲಿ ತಂಗಲು ತಿಂಗಳುಗಳ ಮುಂಚೆಯೇ ಹೋಟೆಲ್ ಇತ್ಯಾದಿಗಳ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ.