ನವದೆಹಲಿ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತಿಗೆ ತಡೆಯೊಡ್ಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್ಐಇಒ)ದ ಮಹಾ ನಿರ್ದೇಶಕ (ಡಿಜಿ) ಡಾ.ಅಜಯ್ ಸಹಾಯ್, ಪಾಕಿಸ್ತಾನ ಮಾರ್ಗವಾಗಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿದ್ದ ಎಲ್ಲಾ ಸರಕು ಸಾಗಾಣಿಕೆಗೆ ತಾಲಿಬಾನ್ ನಿರ್ಬಂಧ ಹೇರಿದೆ ಎಂದಿದ್ದಾರೆ.
ನಾವು ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಪಾಕಿಸ್ತಾನದ ಭಾರತಕ್ಕೆ ವಸ್ತುಗಳು ಆಮದು ಆಗುತ್ತವೆ. ಸದ್ಯ, ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ. ಇದರಿಂದ ಭಾರತಕ್ಕೆ ಆಮದು ಸ್ಥಗಿತಗೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ನೋಡಿ: ಬ್ಯೂಟಿ ಸಲೂನ್‌ನಲ್ಲಿ ಮಹಿಳೆಯರ ಚಿತ್ರಗಳಿಗೆ ತಾಲಿಬಾನ್ ಉಗ್ರರಿಂದ ಕಪ್ಪು ಮಸಿ
ಭಾರತವು ಅಫ್ಘಾನಿಸ್ತಾನದೊಂದಿಗೆ, ವಿಶೇಷವಾಗಿ ವ್ಯಾಪಾರದಲ್ಲಿ ದೀರ್ಘಕಾಲದ ಸಂಬಂಧ ಹೊಂದಿದೆ. ಭಾರತವು ಅಫ್ಘಾನಿಸ್ತಾನದ ಅತಿದೊಡ್ಡ ಪಾಲುದಾರ ದೇಶವಾಗಿದ್ದು, ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು 2021 ಕ್ಕೆ ಸುಮಾರು 835 ಮಿಲಿಯನ್ ಡಾಲರ್ನಷ್ಟಿದೆ. ನಾವು ಸುಮಾರು 510 ಮಿಲಿಯನ್ ಡಾಲರ್ನಷ್ಟು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವ್ಯಾಪಾರದ ಹೊರತಾಗಿ, ಸುಮಾರು 3 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆ. ಸುಮಾರು 400 ಯೋಜನೆಗಳಿಗೆ ಆರ್ಥಿಕ ಸಹಾಯ ನೀಡಿದ್ದೇವೆ ಎಂದು ಸಹಾಯ್ ವಿವರಿಸಿದರು.