ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮಿತಿ ಮೀರಿದೆ. ಪ್ರತಿನಿತ್ಯ ತಾಲಿಬಾನಿಗಳು ಅಫ್ಗಾನ್ನ ಒಂದೊಂದೇ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದೀಗ ಭಾರತ ಸರ್ಕಾರ ಅಫ್ಘಾನಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದ Mi-35 ಹೆಲಿಕಾಪ್ಟರ್ ತಾಲಿಬಾನಿಗಳ ವಶವಾಗಿದೆ.
ಕುಂಡುಜ್ ವಾಯುನೆಲೆ ಮೇಲೆ ದಾಳಿ ಮಾಡಿ ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಪಡೆಗಳಿಂದ ಎಂಐ-35 ಹೆಲಿಕಾಪ್ಟರ್ ಅನ್ನು ಉಗ್ರರು ತಮ್ಮ ಕೈವಶ ಮಾಡಿಕೊಂಡಿದ್ದು, ಈ ಕುರಿತಾದ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ದಿನ ಅಫ್ಘನ್ನಲ್ಲಿ 200 ಉಗ್ರರ ಹತ್ಯೆ: ಕುಂಡುಜ್ ನಗರ ವಶಕ್ಕೆ ಪಡೆದ ತಾಲಿಬಾನ್
ಅಫ್ಘಾನಿಸ್ತಾನದ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸಲು ಭಾರತ ನಿರಾಕರಿಸಿದೆ. ತನ್ನ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನಿಸ್ತಾನಕ್ಕೆ ಈ ಹೆಲಿಕಾಪ್ಟರ್ ಉಡುಗೊರೆಯಾಗಿ ನೀಡಿತ್ತು.
ಆಗಸ್ಟ್ 8 ರಂದು ತಾಲಿಬಾನ್ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಡೆದ ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದರು. ಜೊತೆಗೆ 11 ನಾಗರಿಕರು ಮೃತಪಟ್ಟಿದ್ದರು. ಇದೇ ವೇಳೆ ತಮ್ಮ ಹೋರಾಟ ಹಾಗು ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುತ್ತಲೇ ಇರುವ ತಾಲಿಬಾನಿ ಉಗ್ರರು ಕುಂಡುಜ್ ನಗರವನ್ನು ಕೈವಶ ಮಾಡಿಕೊಂಡಿದ್ದರು.
ಇದನ್ನೂ ಓದಿ: 94 ತಾಲಿಬಾನ್, ಅಲ್-ಖೈದಾ ಉಗ್ರರ ಸದೆಬಡಿದ ಅಫ್ಘನ್ ಸೇನೆ
ಅಫ್ಘಾನಿಸ್ತಾನದಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಲು ತಾಲಿಬಾನ್ ಉಗ್ರರು ಅಮಾಯಕ ನಾಗರಿಕರು ಮತ್ತು ಅಫ್ಘಾನ್ ಸೇನಾ ಸಿಬ್ಬಂದಿಯ ಮಾರಣಹೋಮ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಬೂಲ್ನ ವಿಶ್ವಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿ, ಈ ಮೂಲಕ ಭಯ ಹುಟ್ಟಿಸುವ ಕೆಲಸವನ್ನು ತಾಲಿಬಾನ್ ಮಾಡಿತ್ತು. ಈ ವರ್ಷದ ಮೊದಲ ಆರು ತಿಂಗಳಲ್ಲಿ 1,677 ನಾಗರಿಕರನ್ನು ತಾಲಿಬಾನ್ ಕೊಂದು ಹಾಕಿದೆ ಮತ್ತು 3,644 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾನಿ ಪ್ರಮಾಣ ಶೇ.80 ರಷ್ಟು ಹೆಚ್ಚಾಗಿದೆ.