ಬಾರಾಬಂಕಿ(ಉತ್ತರಪ್ರದೇಶ): ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆ ಕಟ್ಟಲು ಸರ್ಕಾರದಿಂದ ಹಣ ಬಂದ ಕೂಡಲೇ ಕೆಲ ಮಹಿಳೆಯರು ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಧಾನ ಮಂತ್ರಿ ನಗರ ವಸತಿ ಯೋಜನೆಯಡಿ ಮೊದಲ ಕಂತು 50,000 ರೂಪಾಯಿಗಳನ್ನು ತೆಗೆದುಕೊಂಡ ನಂತರ ಐವರು ಮಹಿಳೆಯರು ತಮ್ಮ ಗಂಡಂದಿರನ್ನು ತೊರೆದು ತಮ್ಮ ಪ್ರೇಮಿಗಳೊಂದಿಗೆ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಂಡಂದಿರಿಗೆ ಎರಡೆರಡು ಸಮಸ್ಯೆ.. ತಮ್ಮ ಹೆಂಡತಿಯರ ಪಲಾಯನದಿಂದಾಗಿ ಗಂಡಂದಿರು ಎರಡೆರಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು, ಇನ್ನೂ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ ಅವರಿಗೆ ನೋಟಿಸ್ ಕಳುಹಿಸಿದೆ. ಬೇರೆ ಇಲಾಖೆಯಿಂದ ಹಣ ವಸೂಲಿಯಾಗುವ ಆತಂಕ ಎದುರಾಗಿದೆ. ನೊಂದ ಗಂಡಂದಿರಿಗೆ ಮುಂದೆ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ಅಷ್ಟೇ ಅಲ್ಲ, ಎರಡನೇ ಕಂತಿನ ಹಣವನ್ನು ನೀಡದಂತೆ ಅಧಿಕಾರಿಗಳಿಗೆ ನೊಂದ ಪತಿಯಂದಿರು ಮನವಿ ಮಾಡಿದ್ದಾರೆ.
ಹಣ ವಾಪಸ್ ಪಡೆಯುವ ಎಚ್ಚರಿಕೆ.. 2015 ರಲ್ಲಿ ಪ್ರಧಾನಿ ಮೋದಿ ಅವರು ಕೊಳೆಗೇರಿ ಮತ್ತು ರಸ್ತೆಬದಿಯಲ್ಲಿ ವಾಸಿಸುವ ಬಡವರಿಗೆ ಸೂರು ಕಲ್ಪಿಸಲು ‘ಪ್ರಧಾನ ಮಂತ್ರಿ ನಗರ ವಸತಿ ಯೋಜನೆ’ಯನ್ನು ಪ್ರಾರಂಭಿಸಿದರು. ಯೋಜನೆಯಡಿ ಫಲಾನುಭವಿಗೆ ಮೊದಲ ಕಂತಾಗಿ 50 ಸಾವಿರ, ಎರಡನೇ ಕಂತಾಗಿ ಒಂದು ಲಕ್ಷದ 50 ಸಾವಿರ ಹಾಗೂ ತೃತೀಯವಾಗಿ 50 ಸಾವಿರ ನೀಡುತ್ತದೆ. ಜಿಲ್ಲೆಯಲ್ಲಿ 40 ಫಲಾನುಭವಿಗಳಿದ್ದು, ಮೊದಲ ಕಂತಿನ ಹಣ ಪಡೆದರೂ ಸಹ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ ಮೊದಲ ಕಂತು ಪಡೆದವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಫಲಾನುಭವಿಗಳು ನಿಗದಿತ ಸಮಯದಲ್ಲಿ ಕಾಮಗಾರಿ ಆರಂಭಿಸದಿದ್ದರೆ ಹಣ ವಸೂಲಾತಿ ಮಾಡಲಾಗುವುದು ಎಂದು ಪಿಒ ದೂಡಾ ಸೌರಭ್ ತ್ರಿಪಾಠಿ ಎಚ್ಚರಿಕೆ ನೀಡಿದ್ದಾರೆ.
ಪಿಒ ದೂಡಾ ಸೌರಭ್ ಅವರ ಪ್ರಕಾರ, ಸತ್ರಿಖ್, ಜೈದ್‌ಪುರ, ಬಂಕಿ, ಫತೇಪುರ್ ಮತ್ತು ಬೆಲ್ಹಾರ ನಗರ ಪಂಚಾಯತ್‌ಗಳಲ್ಲಿ ಇಂತಹ ಐದು ಪ್ರಕರಣಗಳು ಬಂದಿದ್ದು, ಇದು ಆಶ್ಚರ್ಯಕರವಾಗಿದೆ. ಈ ಎಲ್ಲಾ ನಗರ ಪಂಚಾಯತ್‌ಗಳ 5 ಫಲಾನುಭವಿಗಳ ಪತ್ನಿಯರು ಮೊದಲ ಕಂತಿನ 50 ಸಾವಿರ ಹಣ ಪಡೆದು ತಮ್ಮ-ತಮ್ಮ ಪ್ರೇಮಿಗಳೊಂದಿಗೆ ಪರಾರಿಯಾಗಿದ್ದಾರೆ. ಇತ್ತೀಚೆಗೆ ಕೆಲವು ನೊಂದ ಪತಿಗಳು ಬಂದು ಎರಡನೇ ಕಂತು ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಾರೆ ಎಂದು ಪಿಒ ದೂಡಾ ತಿಳಿಸಿದರು.
ಪಿಒ ದೂಡಾ ಮಾತನಾಡಿ, ತಮ್ಮ ಹೆಂಡತಿಯರು ಯಾರನ್ನಾದರೂ ಕರೆತಂದು ಇವರೇ ನಮ್ಮ ಪತಿ ಎಂದು ಹೇಳಿ ಎರಡನೇ ಮತ್ತು ಮೂರನೇ ಕಂತುಗಳ ಹಣ ಪಡೆಯಬಹುದಾಗಿದೆ ಎಂದು ಸಂತ್ರಸ್ತ ಗಂಡಂದಿರು ಅನುಮಾನಿಸುತ್ತಿದ್ದಾರೆ. ವಸತಿ ಯೋಜನೆ ಮಹಿಳೆಯರ ಹೆಸರಲ್ಲಿದೆ. ಕಂತು ಕಟ್ಟಿಕೊಂಡು ಮನೆ ನಿರ್ಮಿಸಿಕೊಳ್ಳದಿದ್ದರೆ ಗಂಡನಿಂದ ವಸೂಲಾತಿ ಮಾಡಲಾಗುವುದು. ಮನೆಯ ಹಣದೊಂದಿಗೆ ಪತ್ನಿಯರು ಓಡಿ ಹೋಗಿದ್ದರಿಂದ ಗಂಡಂದಿರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲನೆಯದಾಗಿ ನೊಂದ ಪತಿಗಳಿಗೆ ಹಣದ ಕೊರತೆಯಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ, ಎರಡನೆಯದಾಗಿ ಇಲಾಖೆ ನೀಡಿದ ನೋಟಿಸ್ ಅವರ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಓದಿ: ನಿವೃತ್ತ ಐಎಎಸ್ ಅಧಿಕಾರಿ ಮನೆಯಿಂದ ವಶಪಡಿಸಿಕೊಂಡಿದ್ದ ಹಣ ಹಿಂದಿರುಗಿಸಿ : ಹೈಕೋರ್ಟ್ ಆದೇಶ