ಇಂಫಾಲ್(ಮಣಿಪುರ): ಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಈಗ ಮಣಿಪುರ ರಾಜ್ಯ ಸರ್ಕಾರ ಕೋವಿಡ್ ವ್ಯಾಕ್ಸಿನೇಷನ್(COVID Vaccination) ಹಾಕಿಸಿಕೊಳ್ಳುವವರಲ್ಲಿ ಕೆಲವು ಅದೃಷ್ಟಶಾಲಿಗಳಿಗೆ ಟಿವಿ, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ (ಕಂಬಳಿ) ಗೆಲ್ಲುವ ಅವಕಾಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮೂರು ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಈ ಅವಕಾಶ ನೀಡಲಾಗಿದೆ. 'ಲಸಿಕೆ ಪಡೆಯಿರಿ, ಬಹುಮಾನ ಗೆಲ್ಲಿ' ಎಂಬ ಘೋಷ ವಾಕ್ಯದಡಿ ಈ ಅವಕಾಶ ನೀಡಲಾಗಿದೆ.
ಅಕ್ಟೋಬರ್ 24, ಅಕ್ಟೋಬರ್ 31 ಹಾಗೂ ನವೆಂಬರ್ 7ರಂದು ಲಸಿಕಾ ಅಭಿಯಾನ ನಡೆಯಲಿದೆ. ಮೊದಲ ಬಹುಮಾನವಾಗಿ ಒಂದು ದೊಡ್ಡ ಪರದೆಯ ಟಿವಿ, ಎರಡನೇ ಬಹುಮಾನವಾಗಿ ಮೊಬೈಲ್ ಫೋನ್ ಹಾಗೂ ಮೂರನೇ ಬಹುಮಾನವಾಗಿ ಕಂಬಳಿಗಳನ್ನು ಹಾಗೂ 10 ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನೇಷನ್ನಲ್ಲಿ ಪಾಲ್ಗೊಳ್ಳಬಹುದು. ಪಶ್ಚಿಮ ಇಂಫಾಲ್ ಜಿಲ್ಲೆಯ ಜಿಎಂ ಹಾಲ್, ಪೋಲೋ ಗ್ರೌಂಡ್ ಮತ್ತು ಧರ್ಮಶಾಲಾಗಳಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಣಿಪುರದಲ್ಲಿ ಒಟ್ಟು 16 ಜಿಲ್ಲೆಗಳಿದ್ದು, ಪಶ್ಚಿಮ ಇಂಫಾಲ್ ಜಿಲ್ಲೆಯು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದೆ.
ಇದನ್ನೂ ಓದಿ: ಧರ್ಮ ಮತ್ತು ರಾಜಕೀಯ ಎರಡೂ ಬೇರೆ ಬೇರೆಯಲ್ಲ, ಒಂದಕ್ಕೊಂದು ಪೂರಕ: ಉತ್ತರಾಖಂಡ ಸಿಎಂ