ಚೆನ್ನೈ : ಕೋವಿಡ್ ಕಾರಣದಿಂದಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸರಳವಾಗಿ ಮಾಡಲಾಗುವುದೆಂದು ಬಹುಮತ ಗಳಿಸಿರುವ ಡಿಎಂಕೆ ಪಕ್ಷ ಹೇಳಿದೆ.
ದೇಶ ಮತ್ತು ರಾಜ್ಯಾದ್ಯಂತ ಕೋವಿಡ್ ಅಲೆ ಆತಂಕ ಎಬ್ಬಿಸಿದೆ. ಹೀಗಾಗಿ, ತಮ್ಮ ಪಕ್ಷದ ನೇತೃತ್ವದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸರಳವಾಗಿರುತ್ತದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಭಾನುವಾರ ಚೆನ್ನೈನಲ್ಲಿ ತಿಳಿಸಿದ್ದಾರೆ.
ಮರೀನಾ ಬೀಚ್‌ನಲ್ಲಿ ತಮ್ಮ ತಂದೆ ಮತ್ತು ಪಕ್ಷದ ಪಿತಾಮಹ ‘ಕಲೈನಾರ್’ ಮತ್ತು ‘ಅನ್ನಾ’ ಎಂ ಕರುಣಾನಿಧಿ ಅವರ ಸಮಾಧಿಗೆ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ಪ್ರಮಾಣವಚನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದರು.
ರಾಜ್ ಭವನದಲ್ಲಿ ಸಮಾರಂಭದ ದಿನಾಂಕ ಮತ್ತು ಕಾರ್ಯಕ್ರಮದ ಸಮಯ ಬಗ್ಗೆ ಸೋಮವಾರ ರಾತ್ರಿ ಅಥವಾ ಮಂಗಳವಾರ ಘೋಷಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಮ್ಮ ಪಕ್ಷದ ಚುನಾವಣಾ ಭರವಸೆಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಮತ್ತು ಡಿಎಂಕೆಯ 10 ವರ್ಷಗಳ ದೃಷ್ಟಿ ದಾಖಲೆಯನ್ನೂ ತ್ವರಿತವಾಗಿ ಕೈಗೊಳ್ಳುವುದಾಗಿ ಸ್ಟಾಲಿನ್ ಭರವಸೆ ನೀಡಿದರು.
ನಿನ್ನೆ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬಂದಿದ್ದು, ತಮಿಳುನಾಡಿನಲ್ಲಿ10 ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದ ಡಿಎಂಕೆ 234 ಸ್ಥಾನಗಳ ಪೈಕಿ 157 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.
ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಶೀಘ್ರದಲ್ಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.