ಸೋನಭದ್ರ(ಉತ್ತರ ಪ್ರದೇಶ): ಜಿಲ್ಲೆಯ ಘೋರಾವಾಲ್ ಪ್ರದೇಶದ ಗುರೆತ್ ಕಾಂಪೋಸಿಟ್ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಉಪ್ಪು ರೊಟ್ಟಿ ನೀಡಿದ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಶುಕ್ರವಾರ ಪ್ರಾಂಶುಪಾಲರು ಶಾಲೆಯನ್ನು ಬಿಟ್ಟು ಹೊರಟಾಗ ಮಕ್ಕಳು ಅಪ್ಪಿಕೊಂಡು ಅಳುತ್ತಿರುವ ಭಾವನಾತ್ಮಕ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರಾಂಶುಪಾಲರು ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ಉಪ್ಪು ರೊಟ್ಟಿ ನೀಡಿದ್ದು, ಈ ಬಗ್ಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಇಲಾಖೆಯು ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ. ಪ್ರಾಂಶುಪಾಲರು ಶಾಲೆಯಿಂದ ಹೊರಡಲು ಸಿದ್ಧವಾದಾಗ ಮಕ್ಕಳು ಅವರನ್ನು ಅಪ್ಪಿಕೊಂಡು ಅಳಲು ಪ್ರಾರಂಭಿಸಿದ್ದಾರೆ. ವಿಡಿಯೋದಲ್ಲಿ ಮಕ್ಕಳೊಂದಿಗೆ ಪ್ರಾಂಶುಪಾಲರೂ ಸಹ ಅಳುತ್ತಿರುವುದು ಕಂಡುಬಂದಿದೆ.
ಘೋರಾವಾಲ್ ತಹಶಿಲ್‌ನ ಗುರೆತ್ ಕಾಂಪೋಸಿಟ್ ಶಾಲೆಯ ಪ್ರಾಂಶುಪಾಲ ರುದ್ರಪ್ರಸಾದ್ ಅವರು 2010 ರಿಂದ ಆಗಸ್ಟ್ 25, 2022 ರವರೆಗೆ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ಗ್ರಾಮದ ಮುಖಂಡರ ಮೇಲಿತ್ತು. ಶಾಲೆಗೆ ತರಕಾರಿ ಹಾಗೂ ಗ್ಯಾಸ್ ಸಿಲಿಂಡರ್ ಕೂಡ ಕಳುಹಿಸಿರಲಿಲ್ಲವಂತೆ. ಈ ಕಾರಣದಿಂದ ಮಕ್ಕಳೆಲ್ಲ ಉಪ್ಪು ರೊಟ್ಟಿ ತಿನ್ನಬೇಕಾಗಿತ್ತು ಎಂದು ಹೇಳಲಾಗ್ತಿದೆ. ಹೀಗಾಗಿ ಮಕ್ಕಳು ಪ್ರಾಂಶುಪಾಲರನ್ನು ಅಮಾನತುಗೊಳಿಸಿರುವುದಕ್ಕೆ ಗ್ರಾಮದ ಮುಖ್ಯಸ್ಥರೇ ಕಾರಣ ಎಂದು ದೂಷಿಸಿದ್ದಾರೆ.
ಶಿಕ್ಷಣ ಇಲಾಖೆ ತಮ್ಮ ಪ್ರಾಂಶುಪಾಲರು ಹಾಗೂ ಶಿಕ್ಷಕರ ವಿರುದ್ಧ ಕೈಗೊಂಡಿರುವ ಕ್ರಮ ಹಿಂಪಡೆಯಬೇಕು. ನಮ್ಮ ಪ್ರಾಂಶುಪಾಲರು ಹಾಗೂ ಶಿಕ್ಷಕರು ಶಾಲೆಯಲ್ಲಿ ಇಲ್ಲವಾದರೆ ನಾವೂ ಕೂಡ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ.
ಪ್ರಾಂಶುಪಾಲ ರುದ್ರ ಪ್ರಸಾದ್ ಮಾತನಾಡಿ, ಕಳೆದ ಆ.8ರಿಂದ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುವ ಜವಾಬ್ದಾರಿಯನ್ನು ಗ್ರಾಮದ ಮುಖಂಡರು ವಹಿಸಿಕೊಂಡಿದ್ದಾರೆ. ಆದರೆ, ಗ್ರಾಮದ ಮುಖ್ಯಸ್ಥರು ಅಡುಗೆ ಮಾಡುವವರಿಗೆ ಮಧ್ಯಾಹ್ನದ ಊಟದ ಸಂಪೂರ್ಣ ವಸ್ತುವನ್ನು ನೀಡುವುದಿಲ್ಲ. ಈ ಘಟನೆಗೆ ಗ್ರಾಮದ ಮುಖಂಡರೇ ಹೊಣೆಯಾಗಿದ್ದಾರೆ. ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದ್ದು, ಅದರ ಅಡಿಯಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ಶಿಕ್ಷಕ ವರ್ಗಾವಣೆ: ಬಿಟ್ಟೋಗ್ಬೇಡಿ ಎಂದು ಅಳುತ್ತಾ ಬೀಳ್ಕೊಟ್ಟ ವಿದ್ಯಾರ್ಥಿಗಳು