ನೋಯ್ಡಾ(ಉತ್ತರ ಪ್ರದೇಶ): ನೋಯ್ಡಾದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಸೋಂಕಿತರು 47 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಅವರ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಲಕ್ನೋಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸದ್ಯ ರೋಗಿಯು ಹೋಮ್ ಐಸೋಲೇಷನ್ಗೆ ಒಳಗಾಗಿದ್ದಾರೆ.
ಫಲಿತಾಂಶ ಹೊರಬಂದ ನಂತರವೇ ಈ ಪ್ರಕರಣವನ್ನು ಮಂಕಿಪಾಕ್ಸ್ ಎಂದು ದೃಢೀಕರಿಸಬಹುದು ಎಂದು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೋಗಿಯ ಪ್ರಯಾಣದ ಇತಿಹಾಸವನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ.
ಇದನ್ನೂ ಓದಿ: ಶಿಮ್ಲಾ: ಕಂದಕಕ್ಕೆ ಬಿದ್ದ ಸರ್ಕಾರಿ ಬಸ್.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮಂಕಿಪಾಕ್ಸ್ ಒಂದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದೆ. ಬಹಳ ಅಪರೂಪದ ವೈರಾಣು ಸೋಂಕಾಗಿರುವ ಮಂಕಿ ಪಾಕ್ಸ್, ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುತ್ತದೆ. ಹೆಚ್ಚಿನ ಜನರು ಕೆಲವು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ರೋಗಲಕ್ಷಣಗಳು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ. ಇದು ಸಾಮಾನ್ಯವಾಗಿ ಜ್ವರ, ತಲೆನೋವು, ದದ್ದುಗಳು, ಗಂಟಲು ನೋವು, ಕೆಮ್ಮು ಸೇರಿ ಇತರ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ.
ಭಾರತದಲ್ಲಿ ಈವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ದರಢಪಟ್ಟಿವೆ. ಇದೀಗ ನೋಯ್ಡಾದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.