ಸೂರತ್(ಗುಜರಾತ್): ಮಹಾರಾಷ್ಟ್ರದಲ್ಲಿ ಇಂದು ದಿಢೀರ್ ರಾಜಕೀಯ ಕಂಪನ ಸೃಷ್ಟಿಯಾಗಿದ್ದರೂ ಅದರ ಕೇಂದ್ರಬಿಂದು ಮಾತ್ರ ಗುಜರಾತ್ನಲ್ಲಿದೆ. ತಮ್ಮ ಆಡಳಿತಾರೂಢ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದು ಬಂದಿರುವ ಶಿವಸೇನೆ ಸಚಿವರು, ಶಾಸಕರಿಗೆ ಇಲ್ಲಿನ ಬಿಜೆಪಿ ಸರ್ಕಾರ ಆತಿಥ್ಯ ನೀಡಿದೆ. ಅಲ್ಲದೇ, ಶಿವಸೈನಿಕರು ತಂಗಿರುವ ಐಷಾರಾಮಿ ಹೋಟೆಲ್ ಅನ್ನೇ ಭದ್ರಕೋಟೆಯನ್ನಾಗಿ ಪರಿವರ್ತಿಸಿ, ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಶಿವಸೇನೆಯ ಭಿನ್ನಮತೀಯ ಸಚಿವ ಏಕನಾಥ ಶಿಂಧೆ ಸುಮಾರು 21 ಶಾಸಕರೊಂದಿಗೆ ಮುಂಬೈನಿಂದ 280 ಕಿ.ಮೀ. ದೂರದಲ್ಲಿರುವ ಸೂರತ್ನ ಮೆರಿಡಿಯನ್ ಹೊಟೇಲ್ನಲ್ಲಿ ತಂಗಿದ್ಧಾರೆ. ಹೀಗಾಗಿ ಮಹಾರಾಷ್ಟ್ರ ಮಾತ್ರವಲ್ಲದೇ ಸದ್ಯ ಇಡೀ ರಾಷ್ಟ್ರದ ರಾಜಕಾರಣದ ಗಮನ ಈ ಹೋಟೆಲ್ನತ್ತ ಹರಿದಿದೆ. ಮಂಗಳವಾರ ಬೆಳಗ್ಗೆಯಿಂದಲೇ ಸುಮಾರು 400 ಪೊಲೀಸರು ಇದರ ಕಾವಲು ಕಾಯುತ್ತಿದ್ದಾರೆ.
ಹೋಟೆಲ್ ಬುಕ್ಕಿಂಗ್ ಸ್ಥಗಿತ: ಶಿವಸೇನೆ ಶಾಸಕರಿಗೆ ಹೋಟೆಲ್ ಆತಿಥ್ಯ ಕಲ್ಪಿಸಿರುವುದರಿಂದ ಹೋಟೆಲ್ನಲ್ಲಿ ಅನಿರ್ದಿಷ್ಟ ಅವಧಿಗೆ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ. ಸೋಮವಾರ ರಾತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಆಗಮಿಸಿದ ನಂತರ 300 ರಿಂದ 400 ಪೊಲೀಸರನ್ನು ಹೋಟೆಲ್ ಆವರಣದ ಒಳಗೆ ಮತ್ತು ಹೊರಗೂ ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರವೇಶ ಮತ್ತು ನಿರ್ಗಮನ ಎರಡೂ ಮಾರ್ಗಗಳಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಶಿವಸೇನೆ ತಿರುಮಂತ್ರ: 106 ಕಮಲ ಶಾಸಕರು ಗುಜರಾತ್ಗೆ ಶಿಫ್ಟ್, ಅಖಾಡಕ್ಕಿಳಿದ ಅಮಿತ್ ಶಾ-ನಡ್ಡಾ
ಈ ನಡುವೆ ಮಹಾರಾಷ್ಟ್ರದ ಜಲಗಾಂವ್‌ನ ಬಿಜೆಪಿ ಶಾಸಕ ಸಂಜಯ್ ಕುಟೆ ಮಧ್ಯಾಹ್ನ ತಮ್ಮ ಕಾರಿನಲ್ಲಿ ಹೋಟೆಲ್‌ಗೆ ಆಗಮಿಸಿದರು. ಇಲ್ಲಿ ಬೀಡುಬಿಟ್ಟಿರುವ ಶಿವಸೇನಾ ನಾಯಕರನ್ನು ಭೇಟಿ ಮಾಡಲು ಒಳಗೆ ಹೋಗಲು ಅವರಿಗೆ ಅವಕಾಶ ನೀಡಲಾಯಿತು. ಇದರ ಹೊರತಾಗಿ ಯಾವುದೇ ಹೊರಗಿನ ವ್ಯಕ್ತಿಗಳು ಅಥವಾ ಸಂದರ್ಶಕರನ್ನು ಹೋಟೆಲ್ ಆವರಣಕ್ಕೆ ಪ್ರವೇಶಿಸಲು ಅನುಮತಿ ನೋಡುತ್ತಿಲ್ಲ. ಹೋಟೆಲ್ ಸಿಬ್ಬಂದಿ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಸಿಕ್ಕ ನಂತರ ಮಾತ್ರವೇ ಒಳಗೆ ಹೋಗಲು ಅನುಮತಿಸಲಾಗುತ್ತದೆ ಎಂದು ವರದಿಯಾಗಿದೆ.
ಅಲ್ಲದೇ, ಹೋಟೆಲ್‌ನ ಹೊರ ಆವರಣದ ಹೊರತಾಗಿ, ಹೋಟೆಲ್‌ನ ಒಳಗೂ ಪೊಲೀಸರನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಶಾಸಕರು ತಂಗಿರುವ ಮಹಡಿಗೆ ಬೆಳಗ್ಗೆಯಿಂದಲೇ ಡಿಸಿಪಿ ಮಟ್ಟದ ಅಧಿಕಾರಿಗಳು ನಿಯಮಿತ ಸಮಯದಲ್ಲಿ ಭೇಟಿ ನೀಡಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ಧಾರೆ. ಈ ನಾಟಕೀಯ ರಾಜಕೀಯ ಬೆಳವಣಿಗೆಗಳ ಕುರಿತು ಸುದ್ದಿ ಸಂಗ್ರಹಿಸಲು ಪತ್ರಕರ್ತರು ಮತ್ತು ಕ್ಯಾಮರಾಮ್ಯಾನ್ಗಳ ದೊಡ್ಡ ದಂಡೇ ಹೋಟೆಲ್ ಹೊರಗೆ ಮೊಕ್ಕಾಂ ಹೂಡಿದೆ.
ಇದನ್ನೂ ಓದಿ: 'ಮಹಾ' ರಾಜಕೀಯ ಅಸ್ಥಿರ: ಶಿವಸೈನಿಕ ಶಿಂಧೆ ಬಂಡಾಯ, ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ