ಸೂರತ್, ಪಂಜಾಬ್: ಒಂದೂವರೆ ತಿಂಗಳ ಹಿಂದೆ ಸೂರತ್‌ನಲ್ಲಿ ಉದ್ಘಾಟನೆಗೊಂಡಿದ್ದ ಸೇತುವೆ ಸುಮಾರು ಒಂದು ಅಡಿ ಕುಸಿತಗೊಂಡಿದೆ. ಅಷ್ಟೇ ಅಲ್ಲ ಸೇತುವೆಯ 50 ಮೀಟರ್ ಉದ್ದದವರೆಗೆ ಬಿರುಕುಗಳು ಕಾಣಿಸಿಕೊಂಡಿವೆ. ಸೇತುವೆ ಬಿರುಕು ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿವೆ. ಘಟನೆ ಮುನ್ನಲೆಗೆ ಬರುತ್ತಿದ್ದಂತೆ ಸೂರತ್ ಮುನ್ಸಿಪಲ್ ಕಾರ್ಪೊರೇಶನ್ (SMC) ಏಕಸ್ವಾಮ್ಯ ಕಂಪನಿ ಮತ್ತು ಪ್ರಾಜೆಕ್ಟ್ ಕನ್ಸಲ್ಟೆನ್ಸಿ ಗ್ರೀನ್ ಡಿಸೈನ್‌ಗೆ ನೋಟಿಸ್ ನೀಡಿದೆ.
ಇನ್ನು ಸೂರತ್ ನಗರದ ತಾಪಿ ನದಿಗೆ ನಿರ್ಮಿಸಲಾದ ಗುರುಕುಲ ಮಾರ್ಗದ ಈ ರಸ್ತೆ ಮೊದಲ ಮಳೆಯಲ್ಲೇ ಮುಳುಗಡೆಯಾಗಿದೆ. 118 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ಈ ಸ್ಥಿತಿ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರಾಕಾರ ಮಳೆ ಸೇತುವೆ ಕಾಮಗಾರಿಯನ್ನು ತೆರೆದಿಟ್ಟಿದೆ. ಇದು ಸೂರತ್‌ನ 120 ನೇ ಸೇತುವೆಯಾಗಿದೆ ಮತ್ತು ಇದನ್ನು ಗುರುಕುಲ್ ಪುಲ್ ಎಂದು ಹೆಸರಿಸಲಾಗಿದೆ. ಈ ಸೇತುವೆಯಿಂದಾಗಿ ಆರು ಲಕ್ಷಕ್ಕೂ ಹೆಚ್ಚು ಜನ ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಿದ್ದರು.
ಸೇತುವೆ ಉದ್ಘಾಟನೆ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಉಪಸ್ಥಿತರಿದ್ದರು. SMC ದೊಡ್ಡ ಯಶಸ್ಸನ್ನು ಹೇಳಿಕೊಂಡ ಒಂದೂವರೆ ತಿಂಗಳ ನಂತರ ಒಂದು ಬದಿಯಲ್ಲಿ ಒಂದು ಅಡಿಗಿಂತ ಹೆಚ್ಚು ಕುಸಿತ ಕಂಡಿದೆ. ಇದರಿಂದ ಪಾಲಿಕೆ ಕಾಮಗಾರಿಗಳ ಗುಣಮಟ್ಟ ಬಯಲಾಗಿದೆ. ಸೇತುವೆ ಮುಳುಗಡೆಯಾಗುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಮೌನ ವಹಿಸಿದ್ದಾರೆ.
ಸೇತುವೆಯ ಕಾಮಗಾರಿ, ಪಾಲಿಕೆಯ ಕಾರ್ಯವೈಖರಿ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಎತ್ತುತ್ತಿವೆ. ಘಟನೆಯ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮತ್ತು ಕಾರ್ಯಕರ್ತರು ಸೇತುವೆಯನ್ನು ತಲುಪಿ ಘೋಷಣೆಗಳನ್ನು ಕೂಗಿದರು. ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎರಡೂ ಬದಿಯ ಸೇತುವೆಯನ್ನು ಮುಚ್ಚಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.
ಪ್ರಸ್ತುತ ಸೇತುವೆ ಸ್ಥಳದಲ್ಲಿ, ಭಗವಾನ್ ಸ್ವಾಮಿನಾರಾಯಣನು 207 ವರ್ಷಗಳ ಹಿಂದೆ ತಾಪಿ ನದಿಯನ್ನು ದಾಟಿದರಂತೆ. ಇದನ್ನು ಸ್ವಾಮಿ ನಾರಾಯಣ ಸಂಪ್ರದಾಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಸ್ವಾಮಿ ನಾರಾಯಣ ಪಂಥದ ಪ್ರಕಾರ, ಧರಂಪುರದ ರಾಣಿಯ ಆಹ್ವಾನದ ಮೇರೆಗೆ ಭಗವಾನ್ ಸ್ವಾಮಿನಾರಾಯಣ ಇಲ್ಲಿಗೆ ಆಗಮಿಸಿದರು. ಇಲ್ಲಿಂದ ನದಿ ದಾಟಿ ವರಿಯಾವ್ನಲ್ಲಿ ರಾತ್ರಿ ವಿಶ್ರಮಿಸಿದರು. ಹೀಗಾಗಿ ಈ ಸೇತುವೆಗೆ ಗುರುಕುಲ ಸೇತುವೆ ಎಂದು ಹೆಸರಿಡಲಾಗಿದೆ.
ಓದಿ: ಮುಂಬೈ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ
ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: ಬಿಹಾರದಲ್ಲಿ ಮತ್ತೊಂದು ಸೇತುವೆ ಕೊಚ್ಚಿಕೊಂಡು ಹೋಗಿರುವುದರ ಬಗ್ಗೆ ವರದಿಯಾಗಿದೆ. ಭಾಗಲ್ಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಬಹುಕೋಟಿ ವೆಚ್ಚದ ನಿರ್ಮಾಣದ ಹಂತದ ಸೇತುವೆ ಕುಸಿದು ಬಿದ್ದಿತ್ತು. ಇದೀಗ ವೈಶಾಲಿ ಜಿಲ್ಲೆಯಲ್ಲಿ ಪಿಪಾ ಸೇತುವೆಯ ಒಂದು ಭಾಗವು ಭಾರಿ ಮಳೆ ಮತ್ತು ಬಿರುಗಾಳಿಗೆ ಗಂಗಾ ನದಿಯಲ್ಲಿ ಕೊಚ್ಚಿಹೋಗಿದೆ. ಇದರಿಂದ ರಘೋಪುರ ಭಾಗದ ಜನತೆ ಸಂಪರ್ಕ ಕಡಿದುಕೊಂಡಿದ್ದಾರೆ. ಈ ಬಗ್ಗೆ ಆಡಳಿತ ಪಕ್ಷ ತನಿಖೆ ಕೈಗೊಂಡಿದೆ.