ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೇಂದ್ರ ಸಚಿವ ಸ್ಥಾನ ತೊರೆದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಮೂಲಕ ಪಶ್ಚಿಮಬಂಗಾಳ ವಿಧಾನಸಭೆಗೆ ಸ್ಪರ್ಧಿಸಿ ಜಯಿಸಿದ್ದ ಬಾಬುಲ್ ಸುಪ್ರಿಯೊ ಅವರ ಪ್ರಮಾಣವಚನ ಸ್ವೀಕಾರ ಹಗ್ಗಜಗ್ಗಾಟ ಕೊನೆಗೂ ಅಂತ್ಯಕಂಡಿದೆ. ವಿಧಾನಸಭೆಯ ಉಪ ಸಭಾಧ್ಯಕ್ಷ ಆಶಿಶ್ ಬ್ಯಾನರ್ಜಿ ಅವರು ಬಾಬುಲ್ ಸುಪ್ರಿಯೊ ಅವರಿಗೆ ಪ್ರಮಾಣ ವಚನವನ್ನು ಇಂದು ಬೋಧಿಸಿದರು.
ಬಿಜೆಪಿ ಸಂಸದ ಸ್ಥಾನ ತ್ಯಜಿಸಿ ಟಿಎಂಸಿ ಮೂಲಕ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಬಾಬುಲ್ ಸುಪ್ರಿಯೊಗೆ ಪ್ರಮಾಣವಚನ ಬೋಧಿಸಲು ರಾಜ್ಯಪಾಲ ಜಗದೀಪ್ ಧನಕರ್ ಅವರು ಉಪ ಸಭಾಧ್ಯಕ್ಷರಿಗೆ ಸೂಚನೆ ನೀಡಿದ್ದರು. ಸಾಮಾನ್ಯವಾಗಿ ಶಾಸಕರಿಗೆ ಸ್ಪೀಕರ್ ಅವರು ಪ್ರಮಾಣವಚನ ಬೋಧಿಸುತ್ತಾರೆ. ಆದರೆ, ರಾಜ್ಯಪಾಲರು ಉಪ ಸಭಾಧ್ಯಕ್ಷರಿಗೆ ಬೋಧಿಸಲು ಸೂಚಿಸಿದ್ದರು. ಇದು ಇಬ್ಬರ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.
ಸ್ಪೀಕರ್ ಮೂಲಕವೇ ಪ್ರಮಾಣವಚನ ಬೋಧಿಸಬೇಕು ಎಂದು ಬಾಬುಲ್ ಸುಪ್ರಿಯೊ ಅವರು ರಾಜ್ಯಪಾಲರಿಗೆ ಹಲವು ಬಾರಿ ಮನವಿ ಮಾಡಿದ್ದರೂ, ರಾಜ್ಯಪಾಲರು ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ. ಇದರಿಂದಾಗಿ ಬಾಬುಲ್ ಸುಪ್ರಿಯೊ ಉಪ ಸಭಾಧ್ಯಕ್ಷರ ಮೂಲಕವೇ ಪ್ರಮಾಣ ಸ್ವೀಕರಿಸಲು ಒಪ್ಪಿದ್ದರಿಂದ ಇಂದು ಉಪ ಸ್ಪೀಕರ್ ಆಶಿಶ್ ಬ್ಯಾನರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಪಶ್ಚಿಮ ಬಂಗಾಳದ ವಿಧಾನಸಭೆಯ ಭಾಗವಾಗಲು ತುಂಬಾ ಸಂತೋಷವಾಗಿದೆ. ಇದು ಹೊಸ ಅನುಭವವಾಗಲಿದೆ ಎಂದು ಸುಪ್ರಿಯೊ ಪ್ರಮಾಣವಚನ ಸ್ವೀಕಾರದ ಬಳಿಕ ಹೇಳಿದ್ದಾರೆ. ಬ್ಯಾಲಿಗುಂಗೆ ವಿಧಾನಸಭಾ ಸ್ಥಾನಕ್ಕೆ ಏಪ್ರಿಲ್ 12 ರಂದು ನಡೆದ ಉಪಚುನಾವಣೆಯಲ್ಲಿ ಬಾಬುಲ್ ಸುಪ್ರಿಯೊ ಸ್ಪರ್ಧಿಸಿ ಜಯಿಸಿದ್ದರು. ಆಯ್ಕೆಯಾಗಿ 20 ದಿನ ಕಳೆದರೂ ಪ್ರಮಾಣವಚನ ಸಮಾರಂಭ ನಡೆದಿರಲಿಲ್ಲ.
ಓದಿ: ಮಾನನಷ್ಟ ಮೊಕದ್ದಮೆ: ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೇಳಿದ ರಾಹುಲ್ ಗಾಂಧಿ