ಹೊಸದಿಲ್ಲಿ: ಪೆಗಾಸಸ್ ಗೂಢಚರ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವನ್ನು ರಚಿಸಿ, ಸ್ವತಂತ್ರ ತನಿಖೆ ನಡೆಸುವಂತೆ ಕೋರಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.
ಭಾರತದ ಎಡಿಟರ್ಸ್ ಗಿಲ್ಡ್ ಮತ್ತು ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿಕುಮಾರ್ ಅವರು ಪೆಗಾಸಸ್ ಗೂಢಚರ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖಾ ದಳವನ್ನು ರಚಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಇಸ್ರೇಲಿ ಸ್ಪೈವೇರ್ ಬಳಸಿಕೊಂಡು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ 9 ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸಲಿದೆ.
ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಪ್ರಕಾರ ಪೆಗಾಸಸ್ ಸ್ಪೈವೇರ್ ಬಳಸಿ 300ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳನ್ನು ಟ್ರ್ಯಾಪ್ ಮಾಡಲಾಗಿದ್ದು, ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಬೇಕೆಂದು ಅರ್ಜಿಗಳಲ್ಲಿ ಮನವಿ ಮಾಡಲಾಗಿದೆ.
ಇಸ್ರೇಲ್ನ ಸೈಬರ್ ಸೆಕ್ಯೂರಿಟಿ ಕಂಪನಿಯಾದ ಎನ್ಎಸ್ಒ ಗ್ರೂಪ್ ಅಭಿವೃದ್ಧಿ ಪಡಿಸಿರುವ ಸ್ಪೈವೇರ್ ಟೂಲ್ ಪೆಗಾಸಸ್ ಬಳಸಿ ಭಾರತದ ಗಣ್ಯರು ಸೇರಿದಂತೆ ವಿಶ್ವದ ಹಲವು ನಾಯಕರ ಮೇಲೆಯೂ ಗೂಢಚರ್ಯೆ ನಡೆಸಲಾಗಿತ್ತು ಎಂಬ ಆರೋಪ ಕೆಲದಿನಗಳ ಹಿಂದೆ ಕೇಳಿಬಂದಿದ್ದು, ಅದರ ಮುಂದುವರೆದ ಭಾಗ ಇದಾಗಿದೆ.