ನವದೆಹಲಿ: ರಾಹುಲ್ ಗಾಂಧಿಯವರ ಹೇಳಿಕೆಯ ವಿಡಿಯೋವೊಂದನ್ನು ತಪ್ಪಾದ ಸಂದರ್ಭಕ್ಕೆ ಜೋಡಿಸಿ ಪ್ರಸಾರ ಮಾಡಿದ ಆರೋಪ ಎದುರಿಸುತ್ತಿದ್ದ ಸುದ್ದಿವಾಹಿನಿಯ ಸುದ್ದಿ ಸಂಪಾದಕ ರೋಹಿತ್ ರಂಜನ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ರೋಹಿತ್ ರಂಜನ್ ವಿರುದ್ಧ ದೇಶದ ವಿವಿಧೆಡೆ ಹಲವಾರು ಎಫ್ಐಆರ್ಗಳು ದಾಖಲಾಗಿದ್ದವು.
ಈ ಪ್ರಕರಣದಲ್ಲಿ ಪೊಲೀಸರು ರೋಹಿತ್ ರಂಜನ್ ಅವರನ್ನು ಬಂಧಿಸದಂತೆ ಹಾಗೂ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರ ರಜಾಕಾಲದ ಪೀಠವು ಮಧ್ಯಂತರ ಆದೇಶವನ್ನು ನೀಡಿತು. "ಆರೋಪಿತ ವಿಡಿಯೋ ಥರ್ಡ್ ಪಾರ್ಟಿ ಏಜೆನ್ಸಿಯಿಂದ ಬಂದಿರುವಂಥದ್ದಾಗಿದ್ದು ಮತ್ತು ಅದರಲ್ಲಿನ ಕೆಲ ಮಾಹಿತಿಗಳು ಸತ್ಯಕ್ಕೆ ದೂರವಾಗಿದ್ದವು ಹಾಗೂ ದುರುದ್ದೇಶವಿಲ್ಲದೆ ತಪ್ಪಾಗಿದ್ದರಿಂದ ಸುದ್ದಿ ವಾಹಿನಿಯು ಆ ವಿಡಿಯೋವನ್ನು ತಕ್ಷಣ ಪ್ರಸಾರಣೆಯಿಂದ ಹಿಂಪಡೆದಿತ್ತು ಮತ್ತು ಕ್ಷಮಾಪಣೆ ಕೇಳಿ, ಅದಕ್ಕೆ ಸಂಬಂಧಿಸಿದ ಎಲ್ಲ ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿತ್ತು." ಎಂದು ರೋಹಿತ್ ರಂಜನ್ ತಮ್ಮ ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.