ಮುಂಬೈ, ಮಹಾರಾಷ್ಟ್ರ: ಕೊರೊನಾ ವೈರಸ್ನ ಎರಡನೇ ಅಲೆಯಿಂದಾಗಿ ದೇಶವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆರ್ಥಿಕತೆಯ ಚೇತರಿಕೆಗಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಎಲ್ಲಾ ವಲಯಗಳ ಬೆಂಬಲ ಕೋರಿದ್ದು, ಆರ್ಥಿಕತೆಯ ವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲವೊಂದು ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಎದುರಿಸಿದ ವಲಯಗಳ ಮೇಲಿನ ಒತ್ತಡವನ್ನು ನಿವಾರಿಸಲು ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಬದ್ಧವಾಗಿದೆ ಎಂದು ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಆರ್ಬಿಐ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಕೊರೊನಾ ಅಲೆಯಿಂದಾಗಿ ಆರ್ಥಿಕವಾಗಿ ಸುಮಾರು 2 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿತ್ತು. ಇದೇ ವೇಳೆ ದೇಶೀಯ ಬೇಡಿಕೆಯ ಮೇಲೆ ತೀವ್ರ ಹೊಡೆತ ಬಿದ್ದರೂ ಒಟ್ಟಾರೆ ಪೂರೈಕೆಯ ಪರಿಸ್ಥಿತಿ ಸಮಾಧಾನಕರವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟವರ ಸಂಬಂಧಿಗಳಿಗೆ 4 ಲಕ್ಷ ರೂ. ಪರಿಹಾರ ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ಕೋವಿಡ್ಗಾಗಿ ನೀಡಲಾಗುತ್ತಿರುವ ಲಸಿಕಾ ಅಭಿಯಾನದ ವೇಗವು ದೇಶವು ಕೋವಿಡ್ನಿಂದ ಬೇಗ ಚೇತರಿಸಿಕೊಳ್ಳಲು ಸಹಕರಿಸುತ್ತದೆ. ಈ ಕ್ರಮ ಆರ್ಥಿಕ ಚೇತರಿಕೆಗೆ ಮತ್ತಷ್ಟು ಕಾರಣವಾಗಲಿದೆ ಎಂದು ಆರ್ಬಿಐ ಭರವಸೆ ವ್ಯಕ್ತಪಡಿಸಿದೆ.