ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ ಸುಮನ್ ಬೆರಿ ಅವರು ಸರ್ಕಾರಿ ಥಿಂಕ್ ಟ್ಯಾಂಕ್ ನೀತಿ ಆಯೋಗದ ಉಪಾಧ್ಯಕ್ಷರಾಗಿ ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಬೆರಿ ಅವರು ಈ ಹಿಂದೆ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER) ನ ಡೈರೆಕ್ಟರ್ ಜನರಲ್ (ಮುಖ್ಯ ಕಾರ್ಯನಿರ್ವಾಹಕ) ಮತ್ತು ರಾಯಲ್ ಡಚ್ ಶೆಲ್‌ನ ಜಾಗತಿಕ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಇವರು ಸೇವೆ ಸಲ್ಲಿಸಿದ್ದಾರೆ.
ಬೆರಿ ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು. ಮೇ 1, 2022 ರಿಂದ ಜಾರಿಗೆ ಬರುವಂತೆ ನೀತಿ ಆಯೋದ ಉಪಾಧ್ಯಕ್ಷರಾಗಿ ಸುಮನ್ ಬೆರಿ ಅವರನ್ನು ನೀತಿ ಆಯೋಗ ಸ್ವಾಗತಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಅನುಭವಿ ನೀತಿ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ನಿರ್ವಾಹಕರಾದ ಬೆರಿ ಅವರನ್ನು ಸರ್ಕಾರಿ ಥಿಂಕ್ ಟ್ಯಾಂಕ್‌ನ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಜಾಗಕ್ಕೆ ನೇಮಕಗೊಳಿಸಲಾಗಿದೆ. ಕುಮಾರ್ ಅವರು 2017ರ ಆಗಸ್ಟ್ನಲ್ಲಿ ಆಗಿನ ಉಪಾಧ್ಯಕ್ಷರಾಗಿದ್ದ ಅರವಿಂದ್ ಪಂಗಾರಿಯಾ ಅವರ ಜಾಗಕ್ಕೆ ನೇಮಕಗೊಂಡಿದ್ದರು.
ರಾಜೀವ್ ಕುಮಾರ್ ಅವರು ನನಗೆ ಸಾಕಷ್ಟು ತಾಜಾ, ಯುವ ಪ್ರತಿಭೆಗಳು ಮತ್ತು ಸರ್ಕಾರದ ಒಳಗೆ ಮತ್ತು ಹೊರಗಿನ ಮಧ್ಯಸ್ಥಗಾರರೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿರುವ ಕ್ರಿಯಾತ್ಮಕ ಸಂಸ್ಥೆಯಾಗಿ ನೀತಿ ಆಯೋಗವನ್ನು ಬಿಟ್ಟು ಕೊಡುತ್ತಿದ್ದಾರೆ. ಮಹಾನ್ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಜವಾಬ್ದಾರಿ ವಹಿಸಿಕೊಟ್ಟಿರುವುದಕ್ಕೆ ನನಗೆ ಅಪಾರ ಗೌರವವಿದೆ ಎಂದು ಸುಮನ್ ಬೆರಿ ಹೇಳಿದರು.