ಜೈಪುರ: ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಶೂಟರ್‌ಗಳನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮತ್ತು ದೆಹಲಿ ಪೊಲೀಸರ ವಿಶೇಷ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ತಡರಾತ್ರಿ ಚಂಡೀಗಢದ ಸೆಕ್ಟರ್ 22 ಎ ನಲ್ಲಿರುವ ಹೋಟೆಲ್‌ನಿಂದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಎಂಬಾತನನ್ನು ಬಂಧಿಸಿದೆ.
ಆರೋಪಿಗಳನ್ನು ಜೈಪುರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ. ಅಪರಾಧ ವಿಭಾಗದ ಎಡಿಜಿ ದಿನೇಶ್ ಎಂ.ಎನ್ ಮತ್ತು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕೇಸ್ಗೆ ಸಂಬಂಧಿಸಿದಂತೆ ಒಟ್ಟು ಮೂವರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರ್ ಅಧಿಕಾರಿಗಳು ತಿಳಿಸಿದ್ದಾರೆ.
ಎಡಿಜಿ ಕ್ರೈಂ ದಿನೇಶ್ ಎಂ.ಎನ್. ಮಾತನಾಡಿ "ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಯಶಸ್ಸು ಸಾಧಿಸಿದೆ. ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಂದ ಶೂಟರ್‌ಗಳಾದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಅವರನ್ನು ಸುತ್ತುವರಿಯಲು ಜಂಟಿ ಕಾರ್ಯಾಚರಣೆ ನಡೆಸಲಾಯಿತು. ರಾಜಸ್ಥಾನ ಎಸ್‌ಐಟಿ ಮತ್ತು ದೆಹಲಿ ಪೊಲೀಸರ ವಿಶೇಷ ತಂಡ ಚಂಡೀಗಢದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಇಬ್ಬರು ಉಗ್ರ ಶೂಟರ್‌ಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಜೈಪುರಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು" ಎಂದು ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಲು ವಿವಿಧ ಪೊಲೀಸ್ ತಂಡಗಳು ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಇತರೆ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದವು. ರಾಜಸ್ಥಾನ ಪೊಲೀಸರು ಇತರೆ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ನಡೆಸುವ ಮೂಲಕ ಆರೋಪಿಗಳಿಗಾಗಿ ಶೋಧಿಸುತ್ತಿದ್ದರು. ಅದೇ ಸಮಯದಲ್ಲಿ ಎನ್‌ಐಎ, ಮಿಲಿಟರಿ ಇಂಟೆಲಿಜೆನ್ಸ್ ಮತ್ತು ದೆಹಲಿ ಕ್ರೈಂ ಬ್ರಾಂಚ್‌ನ ತಂಡಗಳು ಸಹ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದವು.
ಶನಿವಾರ ಮುಂಜಾನೆ ಇಬ್ಬರು ಶೂಟರ್‌ಗಳಿಗೆ ಸಹಕರಿಸುತ್ತಿದ್ದ ಹರಿಯಾಣದ ಮಹೇಂದ್ರಗಢ ನಿವಾಸಿ ರಾಮ್‌ವೀರ್ ಜಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ರಾಮವೀರ್, ಶೂಟರ್ ನಿತಿನ್ ಫೌಜಿಯ ಸ್ನೇಹಿತನಾಗಿದ್ದು, ಕೊಲೆಯ ನಂತರ ಆರೋಪಿಗಳಿಬ್ಬರಿಗೂ ಸಹಾಯ ಮಾಡಿದ್ದಾನೆ.
ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಪ್ರಕಾರ, ಡಿಸೆಂಬರ್ 5 ರಂದು ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಇಬ್ಬರು ಶೂಟರ್‌ಗಳಾದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಅವರು ಶ್ಯಾಮ್ ನಗರ ಪ್ರದೇಶದಲ್ಲಿ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಂಧಿತ ಆರೋಪಿ ರಾಮ್‌ವೀರ್ ಜೈಪುರದಲ್ಲಿ ಶೂಟರ್ ನಿತಿನ್ ಫೌಜಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದ್ದಾನೆ. ನಿತಿನ್ ಫೌಜಿಗೆ ಹೋಟೆಲ್ ಮತ್ತು ಜೈಪುರದಲ್ಲಿರುವ ಆತನ ಪರಿಚಯಸ್ಥರ ಫ್ಲಾಟ್ ನಲ್ಲಿ ತಂಗಲು ರಾಮವೀರ್ ವ್ಯವಸ್ಥೆ ಮಾಡಿದ್ದ. ಘಟನೆಯ ನಂತರ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಅವರನ್ನು ಅಜ್ಮೀರ್ ರಸ್ತೆಯಿಂದ ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯಲಾಯಿತು. ಬಳಿಕ ಬಗ್ರು ಟೋಲ್ ಪ್ಲಾಜಾದ ಮುಂದೆ ನಾಗೌರ್ ಡಿಪೋದಿಂದ ಬಸ್‌ನಲ್ಲಿ ಪರಾರಿಯಾಗುವಂತೆ ಸಹಾಯ ಮಾಡಿದ್ದಾನೆ.
ಇದನ್ನೂ ಓದಿ : ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷನ ಹತ್ಯೆ: ದೂರು ನೀಡಿದ ಮೃತರ ಪತ್ನಿ ಶೀಲಾ ಶೇಖಾವತ್
ಘಟನೆಯ ಹಿನ್ನೆಲೆ: ರಾಜಧಾನಿ ಜೈಪುರದ ಶ್ಯಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 5 ರ ಮಂಗಳವಾರ ಮಧ್ಯಾಹ್ನ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಸೇರಿದಂತೆ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಗಲು ಹೊತ್ತಿನಲ್ಲಿಯೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದರು. ಸುಖದೇವ್ ಸಿಂಗ್ ಗೊಗಮೆಡಿ ಅವರಿಗೆ ನಾಲ್ಕು ಗುಂಡು ಹಾರಿಸಲಾಗಿತ್ತು. ನಂತರ ಕುಟುಂಬದವರು ಗೊಗಮೆಡಿಯನ್ನು ಮಾನಸ ಸರೋವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಬಳಿಕ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಮತ್ತೋರ್ವ ಯುವಕ ನವೀನ್ ಸಿಂಗ್ ಕೂಡ ಬುಲೆಟ್ ಗಾಯದಿಂದ ಸಾವನ್ನಪ್ಪಿದ್ದಾರೆ. ಅದೇ ವೇಳೆ ಸುಖದೇವ್ ಸಿಂಗ್ ಗೊಗಮೆಡಿ ಅವರ ಖಾಸಗಿ ಭದ್ರತಾ ಸಿಬ್ಬಂದಿ ಅಜಿತ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ನಂತರ ದುಷ್ಕರ್ಮಿಗಳು ಸ್ಕೂಟರ್‌ಗೆ ಗುಂಡು ಹಾರಿಸಿ, ಸ್ಕೂಟರ್ ಲೂಟಿ ಮಾಡಿ ಪರಾರಿಯಾಗಿದ್ದರು.