ವೆಲ್ಲೂರ್( ಚೆನ್ನೈ): ಹಠಾತ್ ಆಗಿ ಚಲಿಸುತ್ತಿದ್ದ ರೈಲು ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮಧ್ಯ ದಾರಿಯಲ್ಲೇ ಸ್ಥಗಿತಗೊಂಡ ಘಟನೆ ನಡೆದಿದೆ. ತಕ್ಷಣವೇ ರೈಲ್ವೇ ಸಿಬ್ಬಂದಿ ಇಂಜಿನ್ ದುರಸ್ತಿಗೊಳಿಸಿದ ಕಾರಣ, ಸುಮಾರು 12 ನಿಮಿಷಗಳ ಕಾಲ ಸ್ಥಗಿತಗೊಂಡ ನಂತರ ರೈಲು ಮತ್ತೆ ತನ್ನ ಪ್ರಯಾಣ ಮುಂದುವರಿಸಿದೆ.
ಚೆನ್ನೈನಿಂದ ಬೆಂಗಳೂರಿಗೆ ಹೋಗುತ್ತಿದ್ದ ಡಬಲ್ ಟಕ್ಕರ್ ಎಕ್ಸ್‌ಪ್ರೆಸ್ ವಿನ್ನಮ್ಮಗಲಂ ಪ್ರದೇಶದ ಪಕ್ಕದ ಕಡಪಾಡಿ ಊರನ್ನು ಹಾದುಹೋಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಸಿ6 ಬಾಕ್ಸ್ ನಿಂದ ಹೊಗೆ ಬರಲಾರಂಭಿಸಿದೆ. ಹೆಚ್ಚಿನ ಅಪಾಯ ಸಂಭವಿಸುವುದಕ್ಕೂ ಮುನ್ನ ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು. ಚಲಿಸುತ್ತಿದ್ದ ರೈಲಿನಿಂದ ಹೊಗೆ ಬರುತ್ತಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು. ರೈಲು ತಕ್ಷಣವೇ ನಿಂತ ಕಾರಣ ಪ್ರಯಾಣಿಕರು ಕೂಡ ಕೆಳಗಿಳಿದು, ಸಿಬ್ಬಂದಿ ಜೊತೆ ಸೇರಿ ಹೊಗೆ ಬರುತ್ತಿದ್ದ ಜಾಗವನ್ನು ಹುಡುಕಾಡಿದ್ದಾರೆ.
ಆಗ ಬ್ರೇಕ್ ರಿಪೇರಿ ಇದ್ದ ಕಾರಣ ಚಲಿಸುತ್ತಿದ್ದ ರೈಲಿನಿಂದ ಹೊಗೆ ಬರುತ್ತಿದೆ ಎಂಬುದು ಗೊತ್ತಾಗಿದೆ. ನಂತರ ರೈಲ್ವೇ ಮೆಕ್ಯಾನಿಕ್ ಸಿಬ್ಬಂದಿ 12 ನಿಮಿಷದಲ್ಲಿ ಬ್ರೇಕ್ ಏರಿಯಾದಲ್ಲಿನ ದೋಷವನ್ನು ಸರಿಪಡಿಸಿದರು. ಸರಿಯಾಗಿ 12 ನಿಮಿಷಗಳ ನಂತರ ರೈಲು ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದೆ. ಇದರಿಂದಾಗಿ ಇಂದು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಡಬಲ್ ಡೆಕ್ಕರ್ ರೈಲು ಸುಮಾರು 12 ನಿಮಿಷ ತಡವಾಗಿತ್ತು.
ಘಟನೆ ಕುರಿತು ರೈಲ್ವೇ ಇಲಾಖೆ ಆಡಳಿತ ನೀಡಿರುವ ವಿವರಣೆಯಲ್ಲಿ, ರೈಲಿನಲ್ಲಿ ಬ್ರೇಕ್ ವೈಫಲ್ಯದಿಂದ ಹೊಗೆ ಬಂದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಲಾಗಿದೆ. ಇತ್ತೀಚಿಗೆ ದೇಶದಲ್ಲಿ ರೈಲು ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು, ಚಲಿಸುತ್ತಿರುವ ರೈಲಿನಿಂದ ಹೊಗೆ ಹೊರಬಂದು ರೈಲು ಅರ್ಧಕ್ಕೆ ನಿಂತ ಘಟನೆ ಆತಂಕ ಮೂಡಿಸಿದೆ.
ಇತ್ತೀಚಿಗೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಡಿಶಾ ತ್ರಿವಳಿ ರೈಲು ಅಪಘಾತ: ಒಂದು ತಿಂಗಳ ಹಿಂದೆಯಷ್ಟೇ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಹತ್ತಿರ ಮೂರು ರೈಲುಗಳು ಡಿಕ್ಕಿಯಾಗಿ ಸುಮಾರು 300 ಜನರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಗೆ ಪ್ರವೇಶಿಸಿ, ಬಹಾನಗರ್ ಬಜಾರ್ ನಿಲ್ದಾಣದ ಮುಂದೆ ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳು ಸದುರಿ ಪಕ್ಕದ ಹಳಿ ಮೇಲೆ ಬಿದ್ದಿತ್ತು. ಅದೇ ವೇಳೆ ಆ ಹಳಿಯಲ್ಲಿ ಬರುತ್ತಿದ್ದ ಬೆಂಗಳೂರು ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲಿ ಬಿದ್ದಿದ್ದ ಬೋಗಿಗಳಿಗೆ ಗುದ್ದಿ, ಹಳಿ ತಪ್ಪಿ ಬಿದ್ದಿತ್ತು. ಇದರಲ್ಲಿ 190ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಗಂಭೀರ ಗಾಯಗೊಂಡಿದ್ದರು.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ.. ತಂದೆ, ಇಬ್ಬರು ಮಕ್ಕಳ ಬಂಧನ