ಡೆಹ್ರಾಡೂನ್ (ಉತ್ತರಾಖಂಡ್) : ಪಠ್ಯಪುಸ್ತಕದಲ್ಲಿನ ಕವಿತೆಯನ್ನು ಓದಿ ವಿದ್ಯಾರ್ಥಿಯೋರ್ವ ತನ್ನ ಪೋಷಕರನ್ನು ಅಬ್ಬು, ಅಮ್ಮಿ ಎಂದು ಸಂಬೋಧಿಸಿರುವುದಕ್ಕೆ ವಿದ್ಯಾರ್ಥಿಯ ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ದೂರು ನೀಡಿರುವ ಘಟನೆ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ನಡೆದಿದೆ.
2ನೇ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದ ಗುಲ್ಮೋಹರ್-2 ಎಂಬ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ಸಂಬೋಧಿಸಲಾಗಿದೆ. ಇದನ್ನು ಕಲಿತ ನಮ್ಮ ಮಗ ನಮ್ಮನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಆರಂಭಿಸಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಮನೀಶ್ ಮಿತ್ತಲ್ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೋನಿಕಾ ಸಿಂಗ್ ಅವರಿಗೆ ಮಿತ್ತಲ್ ದೂರು ಸಲ್ಲಿಸಿದ್ದಾರೆ.
ಈ ವಿದ್ಯಾರ್ಥಿಯು ಡೆಹ್ರಾಡೂನ್ನಲ್ಲಿರುವ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದು ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಯು ಈ ರೀತಿ ಸಂಬೋಧಿಸುತ್ತಿರುವುದನ್ನು ಕಂಡು ಪೋಷಕರು ಅಚ್ಚರಿಗೊಳಗಾಗಿದ್ದಾರೆ.
ಇದನ್ನೂ ಓದಿ : ಬಾತ್‌ರೂಂನಲ್ಲಿದ್ದ ಆ್ಯಸಿಡ್ ಕುಡಿದು ಮಗು ಸಾವು
ನನ್ನ ಮಗ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆದಾಗ ನಮಗೆ ಒಮ್ಮೆಗೆ ದಿಗ್ಭ್ರಮೆ ಉಂಟಾಯಿತು. ಈ ರೀತಿ ಕರೆಯುವುದನ್ನು ಎಲ್ಲಿಂದ ಕಲಿತೆ ಎಂದು ಮಗನನ್ನು ಕೇಳಿದಾಗ, ಆತ ತನ್ನ ಎರಡನೇ ತರಗತಿ ಪುಸ್ತಕವನ್ನು ತೋರಿಸಿದನು. ಈ ಪಠ್ಯದಲ್ಲಿರುವ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ತೋರಿಸಿದ್ದಾನೆ ಎಂದು ದೂರಿನಲ್ಲಿ ಮನೀಶ್ ಮಿತ್ತಲ್ ಉಲ್ಲೇಖಿಸಿದ್ದಾರೆ.
ನಾವು ಮೊದಲಿಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ನಮ್ಮ ಮಗ ನಮ್ಮನ್ನು ಸತತವಾಗಿ ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಮುಂದುವರೆಸಿದನೋ ಆಗ ಅಚ್ಚರಿಗೊಂಡೆವು. ನಾನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ದೂರು ಸಲ್ಲಿಸಿದ್ದೇನೆ ಎಂದು ಮನೀಶ್ ಮಿತ್ತಲ್ ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಶಿಕ್ಷಣಾಧಿಕಾರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದ್ದಾರೆ. ಇಲಾಖೆಯು ಈ ವಿಷಯವನ್ನು ಪರಿಶೀಲಿಸುತ್ತಿದೆ. ದೂರಿನ ವಿವರಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶಿಕ್ಷಣ ಇಲಾಖೆಯ ಮಹಾನಿರ್ದೇಶಕ ಬನ್ಸಿಧರ್ ತಿವಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿಗೆ ಕೊಲೆ ಬೆದರಿಕೆ..!