ನವದೆಹಲಿ: ಎರಡು ವರ್ಷಗಳ ನಂತರ ಇಸ್ರೇಲಿ ಮೂಲದ ಪೆಗಾಸಸ್ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯಸಭಾ ಸಂಸದ, ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿರುವ ಸ್ವಾಮಿ, ವಿದೇಶಗಳ ವರದಿಯನ್ನು ಉಲ್ಲೇಖಿಸಿ, ಇಸ್ರೇಲಿ ಮೂಲದ ಪೆಗಾಸಸ್ ಟೂಲ್ ಪ್ರಧಾನಿ ಮೋದಿ ಅವರ ಕ್ಯಾಬಿನೆಟ್ನ ಸಚಿವರು, ಆರ್ಎಸ್ಎಸ್ ನಾಯಕರು, ಸುಪ್ರೀಂಕೋರ್ಟ್ನ ನ್ಯಾಯಾಧೀಶರು ಮತ್ತು ಪತ್ರಕರ್ತರ ಫೋನ್ ಟ್ಯಾಪ್ ಮಾಡುತ್ತಿದೆ. ಆ ವರದಿಯನ್ನು ಪಶ್ಚಿಮದ ರಾಷ್ಟ್ರಗಳು ಪ್ರಕಟಿಸುತ್ತವೆ ಎಂಬ ಬಲವಾದ ವದಂತಿಯಿದೆ ಎಂದಿದ್ದಾರೆ.
ಈ ವಿಚಾರ ದೃಢವಾದ ನಂತರ ನಾನು ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಟ್ವಿಟರ್ನಲ್ಲಿ ಸುಬ್ರಮಣಿಯನ್ ಸ್ವಾಮಿ ಸ್ಪಷ್ಟನೆ ನೀಡಿದ್ದು, ಅಕಸ್ಮಾತ್ ದೃಢವಾದರೆ ಸುಬ್ರಮಣಿಯನ್ ಸ್ವಾಮಿ ಅವರಿಂದ ಸ್ಫೋಟಕ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
ಏನಿದು ಪೆಗಾಸಸ್?
ಪೆಗಾಸಸ್, ಇಸ್ರೇಲ್ನ ಸೈಬರ್ ಸೆಕ್ಯೂರಿಟಿ ಕಂಪನಿಯಾದ ಎನ್ಎಸ್ಒ ಗ್ರೂಪ್ ಅಭಿವೃದ್ಧಿ ಪಡಿಸಿರುವ ಸ್ಪೈವೇರ್ ಟೂಲ್ (ಗುಪ್ತ ಮಾಹಿತಿ ಕಲೆ ಹಾಕುವ ಸಾಧನ) ಆಗಿದ್ದು, ಈ ಸಾಧನವನ್ನು ಐಒಎಸ್ (ಆ್ಯಪಲ್ ಮೊಬೈಲ್ನ ಆಪರೇಟಿಂಗ್ ಸಿಸ್ಟಂ) ಮತ್ತು ಆಂಡ್ರಾಯ್ಡ್ ಸಾಧನಗಳಲ್ಲೂ ಬಳಸಬಹುದಾಗಿದೆ.
ಈ ಪೆಗಾಸಸ್ ಟೂಲ್ ಮೇಲ್, ಫೇಸ್ಬುಕ್, ವಾಟ್ಸಪ್, ಟೆಲಿಗ್ರಾಮ್, ಸ್ಕೈಪೇ ಮುಂತಾದ ಅಪ್ಲಿಕೇಷನ್ಗಳಲ್ಲಿನ ಮಾಹಿತಿ ಓದಲು, ಕರೆಗಳನ್ನು ಟ್ರ್ಯಾಕ್ ಮಾಡಲು, ಪಾಸ್ವರ್ಡ್ಗಳನ್ನು ಕಲೆಹಾಕಲು ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: Monsoon session update: ಸಂಸತ್ ನಿಯಮಗಳಿಗೆ ಅನುಗುಣವಾಗಿದ್ರೆ ಯಾವುದೇ ಚರ್ಚೆಗೆ ಸಿದ್ಧ: ಮೋದಿ